ಸಾರಾಂಶ
ಬ್ಯಾಡಗಿ: ನಿರಂತರ ಮಳೆಯಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿದ್ದು, ಪರಿಹಾರಕ್ಕೆ 36 ಸಾವಿರ ರೈತರು ಅರ್ಜಿ ಸಲ್ಲಿಸಿದ್ದು, ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿವಾಸದೆದುರು ರೈತ ಸಂಘದ ಪದಾಧಿಕಾರಿಗಳು ಬಂದು ನಿಲ್ಲಲಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಹಾನಿ ಕಾಟಾಚಾರದ ಸಮೀಕ್ಷೆ ನಡೆಯುತ್ತಿದ್ದು, ತ್ವರಿತಗತಿಯಲ್ಲಿ ಸಮೀಕ್ಷೆ ನಡೆಸಿ ಜಿಲ್ಲೆಯನ್ನು ಅತಿವೃಷ್ಟಿ ಎಂದು ಘೋಷಿಸಿ ಪ್ರಕೃತಿ ವಿಕೋಪದಡಿ ಪರಿಹಾರ ಹಣ ಬಿಡುಗಡೆಗೊಳಿಸಬೇಕು. ಬೆಳೆಹಾನಿ ಪರಿಹಾರವನ್ನು ಜಿಲ್ಲೆಯ ರೈತರಿಗೆ ವಿತರಿಸುವ ವಿಚಾರದಲ್ಲಿ ರೈತ ಸಂಘದ ಪರವಾಗಿ ಜಿಲ್ಲೆಯ ಶಾಸಕರು ನಿಲ್ಲುವ ವಿಶ್ವಾಸವನ್ನಿಟ್ಟುಕೊಂಡಿದ್ದೆವು. ಆದರೆ ಅಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲೆಯ ರೈತರು ಯಾವ ಭರವಸೆಯನ್ನಿಟ್ಟುಕೊಂಡು ಕೃಷಿಯನ್ನು ನಡೆಸಬೇಕಾಗಿದೆ ಎಂದರು.ಬ್ಯಾನರ್ ಕಟ್ಟಲ್ಲ, ಧಿಕ್ಕಾರ ಕೂಗುವುದಿಲ್ಲ. ಆದರೆ ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಜಿಲ್ಲೆಯ 36 ಸಾವಿರ ರೈತರು ಜಿಲ್ಲಾ ಉಸ್ತುವಾರಿ ಪ್ರಶ್ನಿಸಲು ಸೆ. 9ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಬರಲಿದ್ದೇವೆ. ಅರ್ಜಿ ಕೊಟ್ಟ ರೈತರೂ ತಪ್ಪದೇ ಜಿಲ್ಲಾಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ಆಗಮಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದರು.
ಉತ್ತಮ ಕೆಲಸಗಳಿಗೆ ಸ್ವಾಗತ: ಬ್ಯಾಡಗಿ ಮತಕ್ಷೇತ್ರದ ಶಾಸಕರಾದ ಬಸವರಾಜ ಶಿವಣ್ಣನವರ ಕಾಲುವೆಗಳ ಮೂಲಕ 137 ಕೆರೆಗಳನ್ನು ಭರ್ತಿ ಮಾಡುವ ₹115 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದನ್ನು ರೈತ ಸಂಘವು ಮುಕ್ತವಾಗಿ ಸ್ವಾಗತಿಸುತ್ತದೆ. ಆದರೆ ಜಿಲ್ಲೆಯ 36 ರೈತರು ಬೆಳೆಹಾನಿ ಪರಿಹಾರದ ವಿಚಾರವಾಗಿ ನೀಡಿದ ಅರ್ಜಿಗಳ ಕುರಿತು ಜಿಲ್ಲೆಯ ಯಾವೊಬ್ಬ ಶಾಸಕರು ಸಚಿವರು ಸದನದಲ್ಲಿ ಚಕಾರವೆತ್ತದೇ ಇರುವುದು ದುರದೃಷ್ಟಕರ ಸಂಗತಿ ಎಂದರು.ಹೋರಾಟ ಅನಿವಾರ್ಯ: ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಸಂಪೂರ್ಣ ಬೆಳೆಹಾನಿಯಾಗಿದೆ. ಆದರೆ ಅಧಿಕಾರಿಗಳು ತಮಗೆ ಬೇಕಾದ ಕೆಲವಷ್ಟು ರೈತರನ್ನು ಕಟ್ಟಿಕೊಂಡು ಬೆಳೆಹಾನಿ ಸಮೀಕ್ಷೆ ನಡೆಸುತ್ತಿದ್ದು, ಇದಕ್ಕೆ ರೈತ ಸಂಘದ ಸಂಪೂರ್ಣ ವಿರೋಧವಿದೆ. ಜಿಲ್ಲೆಯನ್ನು ಸಾರಾಸಗಟಾಗಿ ಅತಿವೃಷ್ಟಿಯಿಂದ ಹಾನಿಗೊಳಗಾಗಿದೆ ಎಂದು ಘೋಷಣೆ ಮಾಡಬೇಕು. ಒಂದು ಮಾಹಿತಿ ಪ್ರಕಾರ ಕೇವಲ 25 ಸಾವಿರ ಹೆಕ್ಟೇರ್ ಹಾನಿಯಾಗಿದ್ದಾಗಿ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಇದನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ. ಇದೊಂದು ಬೋಗಸ್ ಸಮೀಕ್ಷೆಯಾಗಿದ್ದು, ಕೂಡಲೇ ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ಎನ್ನದೇ ಪರಿಹಾರ ಬಿಡಗಡೆಗೆ ಒತ್ತಾಯಿಸಿದರು.
ವಾಡಿಕೆಗಿಂತ ಮಳೆ ಹೆಚ್ಚು: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಅಧಿಕಾರಿಗಳು ಅತಿ ಹೆಚ್ಚು ಮಳೆಯಿಂದ ಹಾನಿಗೊಳಗಾದ ಬಗ್ಗೆ ಯಾವುದೇ ಸಮೀಕ್ಷೆ ಅವಶ್ಯಕತೆ ಇಲ್ಲ. ಪ್ರಸಕ್ತ ವರ್ಷ ವಾಡಿಕೆಗಿಂತ ಶೇ. 75ರಷ್ಟು ಮಳೆ ಹೆಚ್ಚಾಗಿದೆ. ಬಸಿಗಾಲುವೆ ನಿರ್ಮಿಸಿಕೊಳ್ಳುವಂತೆ ಕೃಷಿ ಅಧಿಕಾರಿಗಳು ಪತ್ರಿಕೆಗಳ ಮೂಲಕ ಬೊಬ್ಬೆ ಹೊಡೆಸಿದ್ದಾಯಿತು. ಹೀಗಿರುವಾಗ ಸಮೀಕ್ಷೆ ಎಂಬ ನಾಟಕವೇಕೆ ಬೇಕು? ಅಂಗೈ ಮೇಲಿನ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ರುದ್ರಗೌಡ ಕಾಡನಗೌಡ್ರ ಪರಮೇಶ ನಾಯಕ್, ಫಕ್ಕೀರೇಶ ಅಜಗೊಂಡ್ರ, ಶಿವಯೋಗಿ ಹೊಸಗೌಡ್ರ, ದಿಳ್ಳೆಪ್ಪ ಮಣ್ಣೂರ, ಮಲ್ಲನಗೌಡ ಮಾಳಗಿ, ಬಸನಗೌಡ ಗಂಗಪ್ಪಳವರ, ರಾಜು ಮುತ್ತಗಿ ಇತರರಿದ್ದರು.