ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಏಳನೆಯ ವೇತನದ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಉಪದಾನ ಕೊಟ್ಟು ಪುಣ್ಯಕಟ್ಕೊಳ್ಳಿ..!ಇದು ಏಳನೆಯ ವೇತನ ಆಯೋಗದ ಅವಧಿಯಲ್ಲೇ ನಿವೃತ್ತಿಯಾದರೂ 6ನೆಯ ವೇತನ ಆಯೋಗದಂತೆ ನಿವೃತ್ತಿ ಉಪದಾನ ಪಡೆದಿರುವ ರಾಜ್ಯದ 30 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರ ಒಕ್ಕೊರಲಿನ ಆಗ್ರಹ.
ಇದಕ್ಕಾಗಿ ಇವರು ಮಾಡದ ಹೋರಾಟ ಉಳಿದಿಲ್ಲ. ಕೊಟ್ಟ ಮನವಿಗಳಿಗೆ ಲೆಕ್ಕವಿಲ್ಲ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸೇರಿದಂತೆ ಹಲವರು ಇವರ ಹೋರಾಟ ಬೆಂಬಲಿಸಿ ಸರ್ಕಾರಕ್ಕೆ ಪತ್ರ ಬರೆದರೂ ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ.ಏನಿದು ನಿವೃತ್ತಿ ಉಪದಾನ?: ರಾಜ್ಯ ಸರ್ಕಾರ ಪ್ರತಿ ಐದು ವರ್ಷಕ್ಕೊಮ್ಮೆ ನೌಕರರ ವೇತನ ಪರಿಷ್ಕರಣೆ ಮಾಡುತ್ತದೆ. ಅದನ್ನು ವೇತನ ಆಯೋಗ ಶಿಫಾರಸ್ಸು ಮಾಡುತ್ತದೆ. ಅದರಂತೆ ಬಿಜೆಪಿಯ ಸರ್ಕಾರ ಇದ್ದಾಗಲೇ ಏಳನೆಯ ವೇತನ ಆಯೋಗದ ಶಿಫಾರಸ್ಸು 2022ರ ಜು. 1ರಿಂದಲೇ ಜಾರಿಯಾಗಬೇಕಿತ್ತು, ಆಗ ಆಗಲಿಲ್ಲ. ಮುಂದೆ ಸರ್ಕಾರದ ಅವಧಿ ಮುಗಿಯಿತು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಬಳಿಕ 2024ರ ಆ. 1ರಂದು ಏಳನೆಯ ವೇತನ ಆಯೋಗ ಜಾರಿಗೊಳಿಸಿತು. ಆದರೆ, ಸೌಲಭ್ಯಗಳು 2022ರ ಜು. 1 ರಿಂದಲೇ ಅನ್ವಯವಾಗುವಂತೆ ವೇತನ ಪರಿಷ್ಕರಣೆ (ಕಾಲ್ಪನಿಕ ವೇತನ) ಮಾಡಿತು. ಹೀಗಾಗಿ ನಿವೃತ್ತರಾದವರಿಗೆ ಪಿಂಚಣಿ, ಹಾಲಿ ಕೆಲಸದಲ್ಲಿರುವ ನೌಕರರಿಗೆ 2022ರಿಂದಲೇ ಅನ್ವಯವಾಗುವಂತೆ ಕಾಲ್ಪನಿಕ ವೇತನ ಬರುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ.ಉಪದಾನಗಳಲ್ಲಿ ತಾರತಮ್ಯ: ಆದರೆ, 2022ರ ಜು.1ರಿಂದ 2024ರ ಜು. 31ರ ಅವಧಿಯಲ್ಲಿ ನಿವೃತ್ತರಾದವರಿಗೆ ನಿವೃತ್ತಿ ಬಳಿಕ ಬರಬೇಕಾದ ಉಪದಾನಗಳು (ಗಳಿಕೆ ರಜೆ, ಕಮ್ಯುಟೇಷನ್, ಡಿಸಿಆರ್‌ಜಿ) 6ನೆಯ ವೇತನದ ಆಯೋಗದ ಶಿಫಾರಸ್ಸಿನಂತೆ ನೀಡಿ ಸರ್ಕಾರ ಕೈತೊಳೆದುಕೊಂಡಿತು. ಒಂದು ವೇಳೆ ಏಳನೆಯ ವೇತನ ಆಯೋಗದಂತೆ ಇವರಿಗೆ ಉಪದಾನ ಕೊಟ್ಟರೆ ಸರ್ಕಾರಕ್ಕೆ ಸರಿಸುಮಾರು ₹6 ಸಾವಿರ ಕೋಟಿ ಹೊರೆಯಾಗುತ್ತದೆ. ಹೀಗಾಗಿ ಪಿಂಚಣಿಯನ್ನು 7ನೆಯ ವೇತನ ಆಯೋಗದಂತೆ, ಉಪದಾನಗಳನ್ನು 6ನೆಯ ವೇತನದ ಆಯೋಗದಂತೆ ಕೊಟ್ಟಿದೆ. ಇದರಿಂದಾಗಿ ಈ ಅವಧಿಯಲ್ಲಿ ನಿವೃತ್ತರಾದ 30 ಸಾವಿರಕ್ಕೂ ಅಧಿಕ ನೌಕರರಿಗೆ ಪ್ರತಿಯೊಬ್ಬರಿಗೂ ₹6 ಲಕ್ಷ ದಿಂದ ಹಿಡಿದು ₹22 ಲಕ್ಷಗಳ ವರೆಗೂ ಉಪದಾನಗಳು ಕಡಿಮೆ ಬಂದಿದೆ.
ಹಲವು ಹೋರಾಟ: ನಾವು 7ನೆಯ ವೇತನದ ಆಯೋಗದ ಅವಧಿಯಲ್ಲೇ ನಿವೃತ್ತರಾದ ಹಿನ್ನೆಲೆಯಲ್ಲಿ ಉಪದಾನಗಳನ್ನೂ ಅದೇ ಲೆಕ್ಕದಲ್ಲೇ ಕೊಡಿ. 6ನೆಯ ವೇತನದ ಆಯೋಗದಂತೆ ನೀಡಿರುವುದು ನಮಗೆ ಮಾಡಿರುವುದು ಅನ್ಯಾಯ ಎಂಬುದು ನಿವೃತ್ತ ನೌಕರರ ಆಗ್ರಹ.ಇದಕ್ಕಾಗಿ ಪ್ರತಿಭಟನೆ, ಧರಣಿ ನಡೆಸಿದ್ದು ಆಯಿತು. ಮುಖ್ಯಮಂತ್ರಿ, ಎಲ್ಲ ಸಚಿವರು, ಸಭಾಧ್ಯಕ್ಷರು, ಸಭಾಪತಿಗಳಿಗೆ ಮನವಿ ಕೊಟ್ಟಿದ್ದು ಆಗಿದೆ. 34 ಸಚಿವರ ಪೈಕಿ 28 ಸಚಿವರು ಇವರ ಪರವಾಗಿ ಪತ್ರ ಕೊಟ್ಟು ಸರ್ಕಾರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಕೂಡ ಬರೆದಿದ್ದಾರೆ. ಜತೆಗೆ ಡಿಸಿಎಂ ಡಿ.ಕೆ. ಶಿವಕುಮಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೂ ಕೋರಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ, ಸಭಾಧ್ಯಕ್ಷ ಯು.ಟಿ. ಖಾದರ ಇವರ ಪರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೂಡ ಇವರ ಪರ ಧ್ವನಿ ಎತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಷ್ಟೆಲ್ಲ ಆದರೂ ಸರ್ಕಾರ ಮಾತ್ರ ಮಿಸುಕಾಡುತ್ತಿಲ್ಲ.
30-40 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಜೀವನದ ಇಳಿ ಹೊತ್ತಿನಲ್ಲಿರುವ ನಿವೃತ್ತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಕೊಟ್ಟಿದ್ದೇವೆ. ಡಿಸಿಎಂ, 28 ಸಚಿವರು, ಸಭಾಪತಿ, ಸಭಾಧ್ಯಕ್ಷರೆಲ್ಲರೂ ನಮ್ಮ ಪರವಾಗಿ ಸರ್ಕಾರಕ್ಕೆ ಪತ್ರ ಬರೆದರೂ ಕ್ಯಾರೆ ಎನ್ನುತ್ತಿಲ್ಲ. ಮುಖ್ಯಮಂತ್ರಿಗಳು ಮನವಿ ಕೊಟ್ಟಾಗಲೊಮ್ಮೆ ಪರಿಶೀಲಿಸುತ್ತೇವೆ ಎನ್ನುತ್ತಾರೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಖಿಲ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದರು.
30-40 ವರ್ಷ ಸರ್ಕಾರಿ ನೌಕರಿ ಮಾಡಿದ ನಮಗೆ ಏಳನೆಯ ವೇತನದಂತೆ ಪಿಂಚಣಿ ನೀಡಿ ನಿವೃತ್ತ ಆರ್ಥಿಕ ಸೌಲಭ್ಯ 6ನೆಯ ವೇತನ ಆಯೋಗದಂತೆ ನೀಡುವುದು ಎಷ್ಟು ಸರಿ? ನಮ್ಮ ಸೇವೆಗೆ ಬೆಲೆ ಇಲ್ಲವೇ? ಎಂದು ಅಖಿಲ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಹುಬ್ಬಳ್ಳಿ ಸಂಚಾಲಕ ವಿಜಯ ಅಣಜಿ ಹೇಳಿದರು.