ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಹಿರೇಹಳ್ಳದಲ್ಲಿ ಮರಳು ಎತ್ತಲು ಯಂತ್ರ ಬಳಸುವುದು ಕಾನೂನು ಬಾಹಿರ. ಈ ಕಾರಣಕ್ಕಾಗಿ ಆಕ್ರೋಶಗೊಂಡಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕೆಲ ತಿಂಗಳುಗಳ ಹಿಂದೆ ಮರಳು ಎತ್ತುವ ಯಂತ್ರ ಪುಡಿ ಪುಡಿ ಮಾಡಿದ್ದರು.ಅಧಿಕಾರಿಗಳು ಮರಳು ಎತ್ತುವ ಯಂತ್ರದ ಮೇಲೆ ತೋರಿದ ಆಕ್ರೋಶ ಅದರ ಮಾಲಿಕರ ಮೇಲೆ ತೋರಲಿಲ್ಲ. ಆ ಯಂತ್ರ ಯಾರದು ಎಂದು ಪತ್ತೆ ಮಾಡಿ, ಅವರ ವಿರುದ್ಧ ಕ್ರಮ ಸಹ ಕೈಗೊಳ್ಳಲಿಲ್ಲ. ಆದರೆ, ಈಗ ಮತ್ತೆ ಹಿರೇಹಳ್ಳದಲ್ಲಿ ಮರಳು ಎತ್ತುವ ಯಂತ್ರಗಳು ಆರ್ಭಟಿಸುತ್ತಿವೆ. ಯಂತ್ರಗಳ ಮೂಲಕ ಮರಳು ಎತ್ತುವುದೇ ಕಾನೂನು ಬಾಹಿರ ಎನ್ನುವ ಅಧಿಕಾರಿಗಳು ಮಾತ್ರ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ.
ಸವಾಲಿಗೆ ಸೇಡು: ಹಿರೇಹಳ್ಳದಲ್ಲಿ ಮರಳು ಎತ್ತುವ ಯಂತ್ರಗಳ ವೀಡಿಯೋಗೆ ಪುಷ್ಪ ಚಿತ್ರದ ಹಾಡು ಹಾಕಿ, ಇಲ್ಲಿ ನಾನೇ ಸಿಎಂ ಯಾರು ಕೇಳುವಂತೆ ಇಲ್ಲ ಎನ್ನುವ ವೀಡಿಯೋ ವೈರಲ್ ಆಗಿದ್ದರಿಂದ ಘಾಸಿಗೊಂಡಿದ್ದ ಅಧಿಕಾರಿಗಳು ಸಾರ್ವಜನಿಕವಾಗಿ ಮುಜುಗರ ತಪ್ಪಿಸಿಕೊಳ್ಳುವುದಕ್ಕೆ ದಾಳಿ ಮಾಡಿದಂತೆ ಮಾಡಿ ಮರಳು ಎತ್ತುವ ಯಂತ್ರಗಳನ್ನು ಪುಡಿ ಪುಡಿ ಮಾಡಿದ್ದರು. ಆದರೆ, ಅದಾದ ಮೇಲೆ ಏನಾಯಿತೋ ಗೊತ್ತಿಲ್ಲ. ಯಾರ ವಿರುದ್ಧವೂ ಇದುವರೆಗೂ ಕ್ರಮವಾಗಿಲ್ಲ. ಈಗ ಮತ್ತೆ ಆಡಳಿತ ವ್ಯವಸ್ಥೆ ಅಣಕಿಸುವಂತೆ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್ ಇಲಾಖೆ ಸಹ ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಇರುವುದು ಈಗ ತೀವ್ರ ಟೀಕೆಗೆ ಗುರಿಯಾಗಿದೆ.
ಹಗಲು, ರಾತ್ರಿ ಯಾರ ಮೂಲಾಜಿಗೂ ಕ್ಯಾರೆ ಎನ್ನದೆ ಮರಳು ಸಾಗಿಸುತ್ತಿರುವುದು ಈಗ ಹಿರೇಹಳ್ಳವನ್ನು ಬರಿದು ಮಾಡುವುದು ಅಷ್ಟೇ ಅಲ್ಲ ಶತಶತಮಾನಗಳಿಂದ ಇರುವ ಹಿರೇಹಳ್ಳಕ್ಕೆ ಸಂಚಕಾರ ತಂದಿವೆ.ಹಿರೇಹಳ್ಳವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಪುನಶ್ಚೇತನ ಮಾಡಿದ್ದರು. ಆದರೆ, ಅದ್ಯಾವುದಕ್ಕೂ ಕ್ಯಾರೆ ಎನ್ನದ ಮರಳು ದಂಧೆ ಈಗ ನಡೆಯುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಹಿರೇಹಳ್ಳ ಬರಿ ನೆನೆಪು ಮಾತ್ರ ಎನ್ನುವಂತೆ ಆಗುವ ಕಾಲ ದೂರ ಇಲ್ಲ.
ಬ್ಯಾರೇಜ್ ಶಿಥಿಲ: ಹಿರೇಹಳ್ಳಕ್ಕೂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಮರಳು ದಂಧೆಯಿಂದ ಈ ಬ್ಯಾರೇಜ್ ಶಿಥಿಲಗೊಂಡಿವೆ. ಹಿರೇಹಳ್ಳದ ಒಡಲು ಮತ್ತು ದಡ ಎರಡನ್ನು ಬಗೆಯುತ್ತಿದ್ದಾರೆ. ಅಗೆದು ಮರಳು ಸಾಗಿಸುತ್ತಿರುವುದರಿಂದ ಎಲ್ಲೆಂದರಲ್ಲಿ ಬಾವಿಗಳಂತೆ ನಿರ್ಮಾಣವಾಗಿದೆ. ಈಗಾಗಲೇ ಕೋಳೂರು ಗ್ರಾಮದ ಬಳಿಯ ಬ್ಯಾರೇಜ್ ಪ್ರವಾಹದ ವೇಳೆ ಕೊಚ್ಚಿಕೊಂಡು ಹೋಗಿದೆ. ಮರಳು ಕುಸಿದಿರುವುದರಿಂದಲೇ ಬ್ಯಾರೇಜ್ ಕೊಚ್ಚಿಕೊಂಡು ಹೋಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.ಅಕ್ರಮದ ವಿರುದ್ಧ ಕ್ರಮವೇಕಿಲ್ಲ: ಹಿರೇಹಳ್ಳದಲ್ಲಿ ಕಾನೂನು ಬಾಹಿರವಾಗಿಯೇ ಮರಳು ಎತ್ತುವ ಯಂತ್ರ ಬಳಕೆ ಮಾಡುತ್ತಿರುವುದು ಹಾಗೂ ಎಲ್ಲೆಂದರಲ್ಲಿ ಅಗೆಯುತ್ತಿರುವುದು ಅಕ್ರಮ ಎಂದು ಆಗಿದ್ದರೂ ಯಾಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಇದರ ಹಿಂದೆ ಇರುವ ಶಕ್ತಿಯಾದರೂ ಯಾವುದು ಎನ್ನುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಅಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಂತಾ ಇಲ್ಲ. ಅಕ್ರಮ ನಡೆಸುವಾಗ ಇದ್ಯಾವುದು ಪರಿಗಣನೆಗೆ ಬರುವುದಿಲ್ಲ ಎನ್ನುವಂತೆ ಇದ್ದಾರೆ. ಹೀಗಾಗಿ, ಅಕ್ರಮದ ವಿರುದ್ಧ ಪ್ರತಿಪಕ್ಷಗಳೂ ಬಾಯಿ ಬಿಡುತ್ತಿಲ್ಲ.