ಸಾರಾಂಶ
ಗದಗ: ಸಮಾಜದಲ್ಲಿನ ತಾರತಮ್ಯಗಳನ್ನು ಕಡಿಮೆಮಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್. ಹೇಳಿದರು. ಅವರು ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಕೃತ ಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡಿದ್ದರು ಎಂದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ ಅವರು ಜಯಂತಿಗೆ ಚಾಲನೆ ನೀಡಿ ಮಾತನಾಡಿ, ಆರ್ಯ ಈಡಿಗ ಸಮುದಾಯದವರು ಮೊದಲು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ಆ ಮೂಲಕ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದರು.ಗದುಗಿನ ಪರಶುರಾಮ ಈಳಗೇರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಅನಿತಾ ಶಿವಮೂರ್ತಪ್ಪ ಕುರ್ತಕೋಟಿ, ಮಂಜುನಾಥ ರಮೇಶ ಹುಲಕೋಟಿ, ಬಸವರಾಜ ಹನುಮಂತಪ್ಪ ಈಳಗೇರ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರಭು ಈಳಗೇರ, ಸಿಂಧು ಈಳಗೇರ, ಅರುಣ ಈಳಗೇರ, ಆನಂದ ಈಳಗೇರ, ಅಭಿಷೇಕ ಈಳಗೇರ, ಶೈಲಾ ಈಳಗೇರ, ಪೃಥ್ವಿ ಈಳಗೇರ, ಭೂಮಿಕಾ ಈಳಗೇರ, ಸಂಜನಾ ಈಳಗೇರ, ಬಸವರಾಜ ಈಳಗೇರ, ಸುಪ್ರೀಯಾ ಹೊಸಪೇಟೆ, ಸಮೃದ್ದಿ ಹಾನಗಲ್, ಆಶಾ ಕುರ್ತಕೋಟಿ, ಅನನ್ಯ ಕುರ್ತಕೋಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ಬೊಮ್ಮನಹಳ್ಳಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಸಮಾಜದ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಾಹುಬಲಿ ಜೈನರ್ ನಿರೂಪಿಸಿದರು.