ಸಾರಾಂಶ
ಗದಗ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವು ಸೆ. 9ರಂದು ಬಸವ ರಥಯಾತ್ರೆ ಜಿಲ್ಲೆಗೆ ಆಗಮಿಸುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಸಂವಾದ, ರಥಯಾತ್ರೆ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರ ಸಮಾಜೋಧಾರ್ಮಿಕ ಆಶಯಗಳನ್ನು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣ, ಸಮಸಮಾಜದ ಪರಿಕಲ್ಪನೆ ಪಸರಿಸುವುದು, ಮೌಢ್ಯ ಆಚರಣೆ ಮತ್ತು ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವುದು, ಕಾಯಕ, ದಾಸೋಹದ ಮಹತ್ವವನ್ನು ಸಾರುವುದು ಮತ್ತು ವ್ಯಕ್ತಿತ್ವ ವಿಕಸ ಹೊಂದುವುದು ಅಭಿಯಾನದ ಮುಖ್ಯ ಧ್ಯೇಯವಾಗಿದೆ ಎಂದು ವಿವರಿಸಿದರು.ಸೆ. 1ರಿಂದ ಬಸವನ ಬಾಗೇವಾಡಿಯಿಂದ ಆರಂಭವಾಗಿರುವ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆಯು ಸೆ. 9ರಂದು ಜಿಲ್ಲೆಗೆ ಆಗಮಿಸಲಿದೆ. ಅಂದು ಬೆಳಗ್ಗೆ 9ಕ್ಕೆ ಬಸವ ರಥದ ಸ್ವಾಗತ, 10ಕ್ಕೆ ತೋಂಟದಾರ್ಯ ಮಠದಲ್ಲಿ ಷಟಸ್ಥಳ ಧ್ವಜಾರೋಹಣ, 11ಕ್ಕೆ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಜೆ 4ಕ್ಕೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳೊಂದಿಗೆ ಬಸವ ರಥದ ಮೆರವಣಿಗೆ, ಸಂಜೆ 6 ಕ್ಕೆ ಸಭಾ ಕಾರ್ಯಕ್ರಮ ಜರುಗಲಿದೆ.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ಮಾತನಾಡಿ, ಸೆ. 9ರಂದು ಸಂಜೆ 6ಕ್ಕೆ ಜರುಗುವ ಸಭಾ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ನಿಜಗುಣ ಪ್ರಭು ಸ್ವಾಮೀಜಿ, ಅಭಿನವ ಮೃತ್ಯುಂಜಯ ಸ್ವಾಮೀಜಿ, ಶಾಂತಲಿಗ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಪಾಲ್ಗೊಳ್ಳುವರು ಎಂದು ಹೇಳಿದರು.ವಿಶ್ರಾಂತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ಎಸ್.ವಿ. ಸಂಕನೂರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಭಾಗವಹಿಸುವರು. ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು ವಿಷಯದ ಕುರಿತು ಆಳಂದದತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಸ್ವಾಮೀಜಿ, ಅಸ್ಪೃಶ್ಯತಾ ನಿವಾರಣೆಗೆ ಶರಣರ ಕೊಡುಗೆ ವಿಷಯದ ಕುರಿತು ಡಾ. ಸಿದ್ಧನಗೌಡ ಪಾಟೀಲ ಉಪನ್ಯಾಸ ನೀಡುವರು. ರಾತ್ರಿ 8ಕ್ಕೆ ಜಂಗಮದೆಡೆಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಕೆ.ಎಸ್. ಚೆಟ್ಟಿ, ಶೇಖಣ್ಣ ಕವಳಿಕಾಯಿ, ಜಿ.ಬಿ. ಪಾಟೀಲ, ಶ್ರೀದೇವಿ ಶೆಟ್ಟರ, ಸುಧಾ ಹುಚ್ಚಣ್ಣವರ, ಗೌರಕ್ಕ ಬಡಿಗಣ್ಣವರ, ಗಿರಿಜಕ್ಕ ಹಸಬಿ, ಅಮರೇಶ ಅಂಗಡಿ ಮುಂತಾದವರು ಹಾಜರಿದ್ದರು.