ಸಾರಾಂಶ
ಗದಗ: ಬಗರ್‌ಹುಕುಂ ರೈತರ ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಹೋರಾಟ ಭಾನುವಾರ ವಿಶೇಷ ರೂಪ ಪಡೆದುಕೊಂಡಿದ್ದು, ರೈತರು ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂದೆಯೇ ಒಲೆ ಹೂಡಿ ರೊಟ್ಟಿ ಮಾಡಿ ಅದನ್ನೇ ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರು ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಅವಲಂಬಿತ ರೈತರು ಹಾಗೂ ನಾಗಾವಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡಿರುವುದರಿಂದ, ಸರ್ಕಾರದಿಂದ ಹಕ್ಕು ಪತ್ರ ಮತ್ತು ಪರಿಹಾರ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸದೇ ಇರುವುದನ್ನು ಬಲವಾಗಿ ಖಂಡಿಸಿದ ಹೋರಾಟಗಾರರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದರು.ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಎನ್.ಟಿ. ಪೂಜಾರ, ಧರಣಿ ನಿರತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಜಿಲ್ಲಾಡಳಿತ ರೈತರ ಬೇಡಿಕೆಗಳನ್ನು ಇಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತತ 20 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದು, ಬಗರ್ ಹುಕುಂ ರೈತರು ರೊಟ್ಟಿಯನ್ನು ಮಾಡುವುದರ ಮೂಲಕ ಸರ್ಕಾರಕ್ಕೆ ರೈತರು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ, ಅನ್ನ ನೀಡುವ ರೈತನಿಗೆ ಅನ್ಯಾಯ ಆಗಬಾರದು, ಹೀಗಾಗಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನಧಾಪ್, ಎಮ್ ಶಲವಡಿ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸತತ 20 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿ ಧೋರಣೆ ಖಂಡನೀಯ, ನ್ಯಾಯಸಮ್ಮತ ಬೇಡಿಕೆಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ವಿವಿಧ ರೀತಿಯ ಶಾಂತಿಯುತವಾದ ಹೋರಾಟಗಳನ್ನು ಮಾಡುತ್ತಾ ಬಂದ್ದಿದ್ದೇವೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆಯೊದಕ್ಕೂ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.