ಮಹಿಳೆಯರು ಅಧ್ಯಾತ್ಮ ಚಿಂತನೆ ಅಳವಡಿಸಿಕೊಳ್ಳಲಿ: ಡಾ. ಪಂಕಜಾ ಬ್ಯಾಕೋಡಿ

| Published : Sep 08 2025, 01:01 AM IST

ಮಹಿಳೆಯರು ಅಧ್ಯಾತ್ಮ ಚಿಂತನೆ ಅಳವಡಿಸಿಕೊಳ್ಳಲಿ: ಡಾ. ಪಂಕಜಾ ಬ್ಯಾಕೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಮದ್ದುಗಳ ಮೂಲಕ ಆರೋಗ್ಯವನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುವ ಆಹಾರ ಪದ್ಧತಿಯನ್ನು ಮಹಿಳೆಯರು ಕುಟುಂಬದ ಸದಸ್ಯರಿಗೆ ನೀಡುವುದರಿಂದ ಇಡೀ ಕುಟುಂಬವೂ ಆರೋಗ್ಯಯುತವಾಗುತ್ತದೆ.

ಹಾನಗಲ್ಲ: ಮಹಿಳೆಯರು ಮಾನಸಿಕವಾಗಿ ಆರೋಗ್ಯಪೂರ್ಣವಾಗಿರಲು ಅಧ್ಯಾತ್ಮ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ನಿತ್ಯ ಬದುಕಿನ ಒತ್ತಡದಲ್ಲಿ ಮಹಿಳೆಯರು ಉತ್ಸಾಹದಿಂದ ಕಾರ್ಯ ನಿರ್ವಹಿಸಲು ಭಜನೆ, ನಾಮಜಪ, ಲಿಖಿತ ಜಪಗಳನ್ನು ರೂಢಿಸಿಕೊಳ್ಳಬೇಕು ಎಂದು ಹುಬ್ಬಳ್ಳಿಯ ಡಾ. ಪಂಕಜಾ ಬ್ಯಾಕೋಡಿ ತಿಳಿಸಿದರು.ಭಾನುವಾರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವೇಕ ಜಾಗೃತ ಬಳಗದ ಹಾನಗಲ್ಲ ಘಟಕ ಆಯೋಜಿಸಿದ್ದ ವನಿತಾ ಸಂಗಮ ಕಾರ್ಯಕ್ರಮದಲ್ಲಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಅಧ್ಯಾತ್ಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಮನೆಮದ್ದುಗಳ ಮೂಲಕ ಆರೋಗ್ಯವನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುವ ಆಹಾರ ಪದ್ಧತಿಯನ್ನು ಮಹಿಳೆಯರು ಕುಟುಂಬದ ಸದಸ್ಯರಿಗೆ ನೀಡುವುದರಿಂದ ಇಡೀ ಕುಟುಂಬವೂ ಆರೋಗ್ಯಯುತವಾಗುತ್ತದೆ ಎಂದರು.

ಆರೋಗ್ಯವಂತ ಮನಸ್ಸಿನಲ್ಲಿ ಅಧ್ಯಾತ್ಮ ವಿಷಯಗಳ ಮನನ ಮಾಡಿಕೊಳ್ಳುವುದು ಸರಳವಾಗುತ್ತದೆ. ಭಕ್ತಿ ಮತ್ತು ಶ್ರದ್ಧೆ, ನಂಬಿಕೆಯಿದ್ದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ನಮ್ಮ ಹಬ್ಬ ಹಾಗೂ ಸಂಪ್ರದಾಯಗಳನ್ನು ಹಿರಿಯರು ರೂಢಿಸುವ ಮೂಲಕ ಆಯಾ ಕಾಲಮಾನಕ್ಕೆ ತಕ್ಕಂಥ ಆಹಾರ ಪದ್ಧತಿಗಳನ್ನು ಅಳವಡಿಸಿಕೊಟ್ಟಿದ್ದಾರೆ.

ನಮ್ಮ ಆಹಾರ ಪದ್ಧತಿಯಿಂದ ಮಾನಸಿಕ ಆರೋಗ್ಯ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಧ್ಯಾತ್ಮಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಸೂರ್ಯನ ದರ್ಶನದಿಂದ ನಮ್ಮ ದೇಹದಲ್ಲಿ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ರಕ್ತಪರಿಚಲನೆ ಸರಳವಾಗುತ್ತದೆ. ಧ್ಯಾನ, ಪೂಜೆ, ನಾಮಜಪಗಳಿಂದ ಮನಸ್ಸು ಶಾಂತವಾಗಿರುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಹೊಸ ಮನೆಗಳಲ್ಲಿ ದೇವರ ಮನೆಗೆ ಕಾಣದಾಗುತ್ತಿವೆ. ದೇವರನ್ನು ಬಿಟ್ಟು ಜೀವನ ಸಾಗಿಸುವುದು, ಬದುಕುವುದು ಯಾವ ಕಾಲಕ್ಕೂ ಸಾಧ್ಯವಾಗುವುದಿಲ್ಲ. ಸಂಕಷ್ಟ ಎದುರಿಸಿದವರಿಗೆ ಮಾತ್ರ ದೇವರು, ಭಕ್ತಿ ಬಗೆಗೆ ಅರಿವಿರುತ್ತದೆ. ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಲು ಪೂಜಾ ಪದ್ಧತಿಗಳು ಸರಳ ಮಾರ್ಗಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ವಿವೇಕ ಜಾಗೃತ ಬಳಗದ ಜಿಲ್ಲಾ ಉಸ್ತುವಾರಿ ಬದರಿನಾಥ ಬೇವಿನಕಟ್ಟಿ, ಹಿರಿಯ ವನಿತಾಶ್ರೀ ಮಾಧುರಿ ಪವಾರ ವೇದಿಕೆಯಲ್ಲಿದ್ದರು. ಬಳಗದ ಉಪಾಧ್ಯಕ್ಷ ಆರ್.ಬಿ. ರೆಡ್ಡಿ ಸ್ವಾಗತಿಸಿದರು. ಖಜಾಂಚಿ ಮಂಜುನಾಥ ದೊಡ್ಡಮನಿ ನಿರೂಪಿಸಿದರು.