ಸಾರಾಂಶ
ಹಾವೇರಿ: ಅತ್ಯಂತ ಪವಿತ್ರವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿಯಾಗಿದೆ. ಆದ್ದರಿಂದ ಶಿಕ್ಷಕರಾದವರು ವೃತ್ತಿ ಘನತೆಯನ್ನು ಎತ್ತಿ ಹಿಡಿಯಲು ತುಂಬಾ ಶ್ರದ್ಧೆ ಮತ್ತು ಸೇವಾ ಮನೋಭಾವದಿಂದ ಮಕ್ಕಳ ಭವಿಷ್ಯವನ್ನು ಕಟ್ಟಲು ಶ್ರಮಿಸಬೇಕು ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಮಾತನಾಡಿದರು.ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ಬೆಳಗುತ್ತದೆ. ಪ್ರಜ್ಞಾವಂತ ಪ್ರಜೆಗಳಿಂದ ಮಾತ್ರ ದೇಶದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುತ್ತದೆ. ಒಬ್ಬ ಉತ್ತಮ ಗುರುವಿನಿಂದ ಮಾತ್ರ ಅತ್ಯುತ್ತಮ ಶಿಷ್ಯಂದಿರು ತಯಾರಾಗಲು ಸಾಧ್ಯ. ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದರು.ಶಿಕ್ಷಕರು ಮನಸ್ಸು ಮಾಡಿದರೆ ಒಂದು ಅತ್ಯುತ್ತಮ, ಮೌಲ್ಯಯುತ ದೇಶವನ್ನು ಕಟ್ಟಲು ಸಾಧ್ಯವಿದೆ. ಈ ಪವಿತ್ರ ವೃತ್ತಿಯ ಪಾವಿತ್ರ‍್ಯವನ್ನು ನಾವೆಲ್ಲ ಕಾಪಾಡಿಕೊಳ್ಳಬೇಕಿದೆ. ಹಾಗೆಯೇ ವಿದ್ಯಾರ್ಥಿನಿಯರು ಉಪನ್ಯಾಸಕರ ಮಾರ್ಗದರ್ಶನವನ್ನು ಪಡೆದುಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ಭಾರತದಲ್ಲಿ ಗುರು- ಶಿಷ್ಯ ಪರಂಪರೆಗೆ ದೊಡ್ಡ ಇತಿಹಾಸವಿದೆ. ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ಒಬ್ಬ ಉತ್ತಮ ಗುರು ನಮ್ಮಲ್ಲಿನ ಅಜ್ಞಾನವನ್ನು ಕಳೆದು ಸುಜ್ಞಾನದ ಬೆಳಕನ್ನು ಚೆಲ್ಲುತ್ತಾನೆ. ಶಿಕ್ಷಕರಾದವರು ಅಂತಹ ಗುರುವಿನ ಪಾತ್ರವನ್ನು ನಿರ್ವಹಿಸುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಗುರುವಿಗೆ ಸಂಪೂರ್ಣ ಶರಣಾಗುವ ಮೂಲಕ ಜ್ಞಾನ ಮತ್ತು ಮೌಲ್ಯಗಳನ್ನು ಸಂಪಾದಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ಸಿ. ಮರಡಿ, ವಿ.ಟಿ. ಹೊನ್ನಪ್ಪನವರ, ಸಿ.ಎಂ. ಕಮ್ಮಾರ, ಎಸ್.ಎಸ್. ನಿಸ್ಸಿಮಗೌಡ್ರು, ರವಿ ಸಾದರ, ವಿ.ಎಸ್. ಪಾಟೀಲ, ಪುಷ್ಪಲತಾ ಡಿ.ಎಲ್., ಮಂಜುನಾಥ ಹತ್ತಿಯವರ, ಶಿವಾನಂದ ಕೆ., ಸುನಂದ ಶೀಲಿ, ಈಶ್ವರಗೌಡ ಪಾಟೀಲ, ಬೀರಪ್ಪ ಕುರುಬರ, ರೂಪ ಪಾಟೀಲ ಇತರರು ಇದ್ದರು. ಜ್ಯೋತಿ ಅರಸಲಿ ಪ್ರಾರ್ಥಿಸಿದರು. ವಿಜೇತ ನಿರೂಪಿಸಿದರು. ಕವಿತಾ ಹೊಳಲು ಸ್ವಾಗತಿಸಿ, ವಂದಿಸಿದರು.