ಸಾರಾಂಶ
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಶನಿವಾರ ನಾಲ್ವರ ವಿಚಾರಣೆ ಮುಂದುವರಿಸಿದ್ದಾರೆ.
ಮಂಗಳೂರು : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಶನಿವಾರ ನಾಲ್ವರ ವಿಚಾರಣೆ ಮುಂದುವರಿಸಿದ್ದಾರೆ.
ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಜಯಂತ್, ಯುಟ್ಯೂಬರ್ ಅಭಿಷೇಕ್, ಸೌಜನ್ಯ ಮಾವ ವಿಠಲಗೌಡ ಇವರನ್ನು ಶುಕ್ರವಾರ ತಡರಾತ್ರಿವರೆಗೂ ವಿಚಾರಣೆ ನಡೆಸಲಾಗಿತ್ತು. ಬಳಿಕ ಶನಿವಾರ ಮತ್ತೆ ವಿಚಾರಣೆ ಮುಂದುವರಿಸಲಾಯಿತು. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಖುದ್ದು ಮಟ್ಟಣ್ಣವರ್ ವಿಚಾರಣೆ ನಡೆಸಿದ್ದಾರೆ.
ಯೂಟ್ಯೂಬರ್ ಅಭಿಷೇಕ್‌ನನ್ನು ನಾಲ್ಕನೇ ದಿನ ವಿಚಾರಣೆ ನಡೆಸಲಾಗಿದೆ. ಜಯಂತ್‌ರನ್ನು ಮೂರನೇ ದಿನ ವಿಚಾರಣೆ ನಡೆಸಲಾಗಿದೆ. ಮಟ್ಟಣ್ಣನವರ್ ಹಾಗೂ ವಿಠಲಗೌಡ ಇವರ ವಿಚಾರಣೆ ಎರಡನೇ ದಿನವೂ ಮುಂದುವರಿದಿದೆ. ಈ ನಾಲ್ಕು ಮಂದಿಯನ್ನೂ ಎಸ್‌ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸುತ್ತಿದ್ದಾರೆ.
ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯನನ್ನು ಪರಿಚಯಿಸಿದ್ದು ಯಾರು? ಚಿನ್ನಯ್ಯ ಧರ್ಮಸ್ಥಳ ತೊರೆದ ಬಳಿಕ ಮೊದಲು ಸಂಪರ್ಕಕ್ಕೆ ಬಂದವರು ಯಾರು? ವಿಠಲಗೌಡಗೆ ಮೊದಲಿನಿಂದಲೂ ಚಿನ್ನಯ್ಯನ ಪರಿಚಯವಿದ್ದ ಬಗ್ಗೆ ಮಾಹಿತಿ ಪಡೆದ ಎಸ್‌ಐಟಿ ತಂಡ, ವಿಠಲಗೌಡ ಮೂಲಕ ಆತ ಬುರುಡೆ ಗ್ಯಾಂಗ್ ಸಂಪರ್ಕಕ್ಕೆ ಬಂದಿರುವ ಸಂಶಯವನ್ನು ವ್ಯಕ್ತಪಡಿಸಿದೆ.
ಮನಾಫ್ ವಿಚಾರಣೆಗೆ ಗೈರು
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿರುವ ಕೇರಳದ ಯೂಟ್ಯೂಬರ್ ಮನಾಫ್ ಶನಿವಾರ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಗಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಮನಾಫ್‌ಗೆ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.