ಸಾರಾಂಶ
ನಾರಾಯಣ ಹೆಗಡೆ
ಹಾವೇರಿ: ಜಿಲ್ಲೆಯ ನೀರಿನ ಸಮಸ್ಯೆ ನೀಗಿಸುವ ಉದ್ದೇಶಿತ ಬೇಡ್ತಿ- ವರದಾ ಲಿಂಕ್ ಯೋಜನೆ ಸಾಕಾರಕ್ಕೆ ಜಿಲ್ಲೆಯಲ್ಲಿ ಪಕ್ಷಾತೀತ ಹೋರಾಟದ ಅಗತ್ಯವಿದೆ. ಜತೆಗೆ, ಯೋಜನೆಗಾಗಿ ಜಿಲ್ಲೆಯಲ್ಲಿ ಜನಾಂದೋಲನ ರೂಪುಗೊಳ್ಳಬೇಕಿದೆ.ಬೇಡ್ತಿ- ವರದಾ ಯೋಜನೆ 3 ದಶಕಗಳಷ್ಟು ಹಳೆಯದಾದರೂ ಜಿಲ್ಲೆಯಲ್ಲಿ ಅನುಷ್ಠಾನದ ಬಗ್ಗೆ ದೊಡ್ಡ ಧ್ವನಿ ಕೇಳಿರಲಿಲ್ಲ. ಪಕ್ಷಾತೀತ ಹೋರಾಟವೂ ನಡೆದಿಲ್ಲ. ಇದೇ ಕಾರಣದಿಂದ ಯೋಜನೆ ಆಗಲೇಬೇಕು ಎಂಬ ಕೂಗು ಜನರಿಂದ ಕೇಳಿ ಬರಲಿಲ್ಲ. ಆದ್ದರಿಂದ ಅಲ್ಲಿ ವಿರೋಧ ವ್ಯಕ್ತವಾಗುತ್ತಲೇ ಯೋಜನೆ ತಾತ್ಕಾಲಿಕವಾಗಿ ಬಂದ್ ಆಗುತ್ತಲೇ ಬಂದಿದೆ. ಅದಕ್ಕಾಗಿ ಈ ಸಲ ಜಿಲ್ಲೆಯಲ್ಲಿ ಪಕ್ಷಾತೀತ ಹೋರಾಟ, ಜನಾಂದೋಲನ ರೂಪುಗೊಳ್ಳುವುದು ಅಗತ್ಯವಿದೆ.
ಜಿಲ್ಲೆಗಾಗಿ ರಾಜಕಾರಣ ಮಾಡಲೇಬೇಕು: ನೀರು ಎಲ್ಲರಿಗೂ ಸೇರಿದ್ದಾಗಿದ್ದು, ನೀರಿನ ಸಮಸ್ಯೆ ಲೋಕಲ್‌ನಿಂದ ಗ್ಲೋಬಲ್‌ವರೆಗೂ ಇದೆ. ನಮ್ಮ ಜಿಲ್ಲೆಗೆ ನೀರು ಬೇಕು ಎನ್ನುವುದಕ್ಕೆ ನಾವು ರಾಜಕಾರಣ ಮಾಡಬೇಕಾಗುತ್ತದೆ. ಅದಕ್ಕಾಗಿ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕಿದೆ. ಆಗ ಮಾತ್ರ ಹೋರಾಟಕ್ಕೆ ಶಕ್ತಿ ಬರಲಿದೆ.ಜಿಲ್ಲೆಯ ಎಲ್ಲ ಶಾಸಕರು ಮಾಜಿ ಸಿಎಂ ಬೊಮ್ಮಾಯಿ ಅವರೊಂದಿಗೆ ನಿಲ್ಲಬೇಕಿದೆ. ಇಲ್ಲಿ ಪಕ್ಷ ರಾಜಕೀಯ, ಕ್ರೆಡಿಟ್ ವಾರ್ ಎಂಬುದನ್ನು ಮರೆತು ಜಿಲ್ಲೆಯ ರೈತರ ಭವಿಷ್ಯ ಅಗಡಿದೆ ಎಂಬುದನ್ನು ಅರಿಯಬೇಕಿದೆ. ಈಗಾಗಲೇ ಜಿಲ್ಲೆಯ ರೈತರು ಯೋಜನೆಗಾಗಿ ಎದ್ದು ಕೂತಿದ್ದಾರೆ. ಕಾನೂನಾತ್ಮಕ, ಆಡಳಿತಾತ್ಮಕ ಹೋರಾಟದ ಜತೆಗೆ ಸಂಘಟನಾತ್ಮಕವಾಗಿಯೂ ಹೋರಾಟ ನಡೆಯಬೇಕಿದೆ.
ಸವಾಲು ಎದುರಿಸಬೇಕು: ಯಾವುದೇ ಯೋಜನೆ ಆರಂಭವಾಗಬೇಕಾದರೆ ಅಷ್ಟು ಸುಲಭದಲ್ಲಿ ಆಗುವುದಿಲ್ಲ. ಅದೇ ರೀತಿ ಪರಿಸರ ವಿಷಯದ ಕಾರಣಕ್ಕೆ ನೀರಾವರಿ ಯೋಜನೆಗಳು ಅಷ್ಟು ಬೇಗ ಸಾಕಾರಗೊಳ್ಳುವುದಿಲ್ಲ ಎನ್ನುವುದಕ್ಕೆ ಹಲವು ಯೋಜನೆಗಳು ನನೆಗುದಿಗೆ ಬಿದ್ದಿರುವುದನ್ನು ನೋಡಬಹುದು.ಅದಕ್ಕಾಗಿ ಯೋಜನೆಯ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಬದಲಾದ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೂ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಸಂಘರ್ಷ ಬಿಟ್ಟು ಮನವೊಲಿಕೆ ಮಾಡಬೇಕಿದೆ. ಯೋಜನೆಗೆ ಅನೇಕ ಅಡೆತಡೆ, ಸವಾಲು ಬರುತ್ತವೆ. ಹಾಗೆಯೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಹೀಗಾಗಿ ಎಲ್ಲ ಸವಾಲುಗಳನ್ನು ಮೀರಿ ಯೋಜನೆ ಕಾರ್ಯಗತಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ನಮ್ಮ ರೈತರಿಗೆ ಕುಡಿಯುವ ನೀರು ಸಿಗುವಂತೆ ಮಾಡಲು ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ. ಅದಕ್ಕಾಗಿ ಎಲ್ಲ ಶಾಸಕರು, ರೈತ ಸಂಘದ ಸದಸ್ಯರು, ಸ್ವಾಮಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಿಕೊಂಡು ಹೋರಾಟ ಮುಂದುವರಿಸಬೇಕು.ಪೂರ್ವಭಾವಿ ಸಭೆ
ಬೇಡ್ತಿ- ವರದಾ ನದಿ ಯೋಜನೆ ಬಗ್ಗೆ ಕಳೆದ ತಿಂಗಳು ಹಾವೇರಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆ ಕೇವಲ ಒಂದು ಪಕ್ಷಕ್ಕೆ ಸೀಮಿತವಾದಂತೆ ಕಂಡುಬಂತು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು, ಮಠಾಧೀಶರು ಪಾಲ್ಗೊಂಡು ಯೋಜನೆ ಬೆಂಬಲಿಸಿದರು. ಆದರೆ, ಜಿಲ್ಲೆಯ ಯಾವ ಶಾಸಕರೂ ಪಾಲ್ಗೊಳ್ಳದಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಿತ್ತು. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಯೋಜನೆಗಾಗಿ ಹೋರಾಟ ನಡೆಯಬೇಕಿದೆ.ಯೋಜನೆ ಆಗಲೇಬೇಕು: ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ಈ ಯೋಜನೆ ಆಗಲೇಬೇಕು. ನಾನು ಇದರ ಅನುಷ್ಠಾನಕ್ಕೆ ಸಾಕಷ್ಟು ಶ್ರಮಪಟ್ಟಿದ್ದೇನೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ನನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರದಿಂದಲೇ ಈ ಯೋಜನೆ ಕಾರ್ಯಗತವಾಗಬೇಕು. ಜಿಲ್ಲೆಯಲ್ಲೂ ಡ್ಯಾಂ ಕಟ್ಟಬೇಕು. ಬೊಮ್ಮಾಯಿ ಅವರು ಮನಸ್ಸು ಮಾಡಿದರೆ ಇದು ಕಾರ್ಯಗತವಾಗುತ್ತೆ. ನಾನು ಬೊಮ್ಮಾಯಿಗೆ ಬೆನ್ನೆಲುವಾಗಿ ಇರುತ್ತೇನೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ತಿಳಿಸಿದರು.