ಸರ್ಕಾರಕ್ಕೆ ಶೀಘ್ರ ಬೆಳೆಹಾನಿ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ

| Published : Sep 08 2025, 01:01 AM IST

ಸರ್ಕಾರಕ್ಕೆ ಶೀಘ್ರ ಬೆಳೆಹಾನಿ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಜಿಲ್ಲೆಯ ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ಲ ತಾಲೂಕುಗಳಿಗೆ ಭೇಟಿ ನೀಡಿ ಹಾನಿಗೀಡಾದ ಬೆಳೆಗಳನ್ನು ವೀಕ್ಷಿಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು.

ಹಾವೇರಿ/ಬ್ಯಾಡಗಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಭಾಗಗಳಲ್ಲಿ ಬೆಳೆಹಾನಿಯಾಗಿದ್ದು, ಅಂತಹ ಜಮೀನುಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯ ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ಲ ತಾಲೂಕುಗಳಿಗೆ ಭೇಟಿ ನೀಡಿ ಹಾನಿಗೀಡಾದ ಬೆಳೆಗಳನ್ನು ವೀಕ್ಷಿಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿಯವರು ಕೆಳಗೊಂಡ, ತಡಸ, ಮತ್ತೂರು, ಮಡ್ಲೂರು, ಕಚವಿ, ಚಿನ್ನಮುಳಗುಂದ, ಬಾಳೂರು, ಹನುಮನಹಳ್ಳಿ, ಬಾಳಂಬಿಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ನಿರಂತರ ಮಳೆಯಿಂದ ಹಾನಿಯಾದ ಬೆಳೆಗಳನ್ನು ಪರಿಶೀಲಿಸಿ ಹಾನಿಯಾದ ಬೆಳೆಗಳ ಕುರಿತು ಶೀಘ್ರ ವರದಿ ತಯಾರಿಸಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಳಲು ತೋಡಿಕೊಂಡ ರೈತರು: ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೆವು. ಆದರೆ ಅತಿಯಾದ ಮಳೆಯಿಂದ ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಈ ವರ್ಷ ಉತ್ತಮ ಬೆಳೆ ಬಂದರೆ ನಮ್ಮ ಕಷ್ಟವೆಲ್ಲವೂ ತಿರುತ್ತೇ ಅಂದುಕೊಂಡಿದ್ದೆವು. ಆದರೆ ಈಗ ಪರಿಸ್ಥಿತಿನೇ ಬೇರೆಯಾಗಿದೆ. ಬೇಗ ಸರ್ಕಾರದಿಂದ ಬೆಳೆಹಾನಿ ಪರಿಹಾರ ಕೊಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಈಗಾಗಲೇ ಬೆಳೆಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆದುಕೊಳ್ಳುತ್ತಿದ್ದೇವೆ. ಅಧಿಕಾರಿಗಳಿಗೂ ಶೀಘ್ರ ಬೆಳೆ ಹಾನಿ ಕುರಿತು ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ. ಶೀಘ್ರ ಸರ್ಕಾರಕ್ಕೆ ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ಕುರಿತು ವರದಿ ಸಲ್ಲಿಸಿ ರೈತರಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದರು.

ಈ ವೇಳೆ ಜಂಟಿ ಕೃಷಿ ನಿರ್ದೇಶಕ ಡಾ. ಕೆ. ಮಲ್ಲಿಕಾರ್ಜುನ, ತಹಸೀಲ್ದಾರ್ ಚಂದ್ರಶೇಖರ ನಾಯಕ, ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಕುರುಬರ, ಗ್ರಾಪಂ ಅಧ್ಯಕ್ಷ ದಿಲೀಪಕುಮಾರ ಮೇಗಳಮನಿ, ಹೊನ್ನಪ್ಪ ಸಣ್ಣಬಾರ್ಕಿ, ನಾಗರಾಜ ಬನ್ನಿಹಟ್ಟಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.