ಸಾರಾಂಶ
ಗದಗ ಪರಿಸರದಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ದಿ. ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಗದಗ: ಗದಗ ಪರಿಸರದಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ದಿ. ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಅವರು ಶುಕ್ರವಾರ ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ, ಬಿ.ಜಿ. ಅಣ್ಣಿಗೇರಿ ಗುರುಗಳ 6ನೇ ಪುಣ್ಯಸ್ಮರಣೆ ಮತ್ತು ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಗುರುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಬಿ.ಜಿ. ಅಣ್ಣಿಗೇರಿ ಅವರ ಸೇವೆ ನಿಜಕ್ಕೂ ಶ್ಲ್ಯಾಘನೀಯವಾದದ್ದು, ಅವರು ವ್ಯಕ್ತಿಯಾಗಿ ಅದಮ್ಯ ಶಕ್ತಿಯಾಗಿ, ಗುರುಕುಲ ಮಾದರಿಯ ಆಶ್ರಮವಾಗಿ ಸಲ್ಲಿಸಿದ ಸೇವೆ ಎಂದಿಗೂ ಮರೆಯಲಾರದ್ದು. ವಿದ್ಯಾರ್ಥಿಗಳಿಗೆ ಉಚಿತ ಪಾಠ ಹೇಳಿ, ಅನ್ನ, ವಸತಿ ನೀಡಿದ ಮಹಾತ್ಮರು ಎಂದು ಬಣ್ಣಿಸಿದರು. ಅಣ್ಣಿಗೇರಿ ಅವರ ಶಿಷ್ಯರು ರಾಜ್ಯಕ್ಕೆ ರ್‍ಯಾಂಕ್ ತರುವ ಮೂಲಕ ಗುರುವಿನ ಹೆಸರನ್ನು, ಆಶ್ರಮದ ಹೆಸರನ್ನು ಚಿರಸ್ಥಾಯಿಗೊಳಿಸಿದವರು. ಅಣ್ಣಿಗೇರಿ ಅವರ ಪ್ರತಿಭಾನ್ವಿತ ಸಾವಿರಾರು ಶಿಷ್ಯರು ರಾಜ್ಯ, ದೇಶ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವದು ಅವರ ಮೇರು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದರು. ಶಿವಕುಮಾರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಉತ್ತಮ ಮತ್ತು ಮಾದರಿ ಕಾರ್ಯ ಮಾಡುತ್ತಿದೆ. ಪ್ರತಿಭಾನ್ವಿತರ ಮನೆ ಬಾಗಿಲಿಗೆ ಹೋಗಿ ಪ್ರತಿಭಾ ಪುರಸ್ಕಾರ, ಪ್ರಮಾಣಪತ್ರ, ಸಿಹಿ ನೀಡಿ ಸನ್ಮಾನಿಸಿ ಲಕ್ಷಾನುಗಟ್ಟಲೆ ಹಣ ನೀಡುತ್ತಿರುವದು ಶಿಕ್ಷಣಕ್ಕೆ, ಗುರುವಿಗೆ ಸಲ್ಲಿಸುತ್ತಿರುವ ಗೌರವವಾಗಿದ್ದು ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳ ಕಾರ್ಯ ಅಭಿನಂದನೀಯ ಎಂದರು. ಗದುಗಿನ ಎಂ.ಎ.ಸಂಸ್ಕೃತ ವಿದ್ವಾನ್‌ರಾದ ಎನ್.ಎನ್. ಭಟ್ ಅವರಿಗೆ ಸ್ವಾಮೀಜಿಗೆ ಗುರುಶ್ರೀ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಗದುಗಿನ ಕೆ.ಎಚ್. ಪಾಟೀಲ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದ ಕರಿನಾಗಣ್ಣವರ, ಹುಬ್ಬಳ್ಳಿಯ ನಿವೃತ್ತ ಪ್ರಾಚಾರ್ಯ ಎಸ್.ಬಿ.ಹಿರೇಮಠ, ಬೆಂಗಳೂರಿನ ಶ್ರೀನಿವಾಸ ಸುರೇಬಾನ, ರೋಣ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಐ.ಬಿ. ಕೊಟ್ಟೂರಶೆಟ್ಟಿ ಅವರು ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಹಾಗೂ ಅವರ ನಂತರ ಅಶ್ರಮದಲ್ಲಿ ಶಿಕ್ಷಣ ನೀಡುವ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್. ಪಾಟೀಲ ಸಂದರ್ಭೋಚಿತವಾಗಿ ಮಾತನಾಡಿದರು. ಆಶ್ರಮದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಾನಂದ ಕಟ್ಟಿ ಸ್ವಾಗತಿಸಿದರು. ಎಸ್.ಕೆ. ಮುದ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಶಚಂದ್ರ ಬೆಟದೂರ ವರದಿ ವಾಚಿಸಿದರು. ವಿಜಯಲಕ್ಷ್ಮೀ ಅಂಗಡಿ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ವಿವಿಧ ಸೇವಾಕರ್ತರನ್ನು ಗೌರವಿಸಲಾಯಿತು. ಕಳಕಪ್ಪ ಕುರ್ತಕೋಟಿ ನಿರೂಪಿಸಿದರು. ರವಿ ದಂಡಿನ ವಂದಿಸಿದರು.ಕಾರ್ಯಕ್ರಮದಲ್ಲಿ ಡಾ. ಶರಣಬಸವ ಚೌಕಿಮಠ, ಡಾ. ಬಸಯ್ಯ ಬೆಳ್ಳೇರಿಮಠ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ. ಬಸವರಾಜ ಚನ್ನಪ್ಪಗೌಡರ, ಎಸ್.ಆರ್. ಪಾಟೀಲ, ಅನಿಲ ಹೊಸಳ್ಳಿಮಠ, ಸಿದ್ಧಲಿಂಗಪ್ಪ ಅರಳಿ, ಮೋಹನ ಪೊಲೀಸ್‌ಪಾಟೀಲ, ಬಸವರಾಜ ಚನ್ನಳ್ಳಿ, ಸಿದ್ಧಣ್ಣ ಕವಲೂರ, ಬಸವರಾಜ ಬಿಂಗಿ, ಗುರುರಾಜ ಅಣ್ಣಿಗೇರಿ, ಮಂಜುಳಾ ತುಂಬರಮಟ್ಟಿ ಸೇರಿದಂತೆ ಮುಂತಾದವರಿದ್ದರು.