ಚಿರತೆ ದಾಳಿಗೆ ತುತ್ತಾಗಿ 36 ಕುರಿ ಮರಿಗಳು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಬ್ಯಾಲಕುಂದಿ ಗ್ರಾಮದ ಸಮೀಪ ನಡೆದಿದೆ.
ಮರಿಯಮ್ಮನಹಳ್ಳಿ: ಚಿರತೆ ದಾಳಿಗೆ ತುತ್ತಾಗಿ 36 ಕುರಿ ಮರಿಗಳು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಬ್ಯಾಲಕುಂದಿ ಗ್ರಾಮದ ಸಮೀಪ ನಡೆದಿದೆ.
ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿಯ ಕುರಿಗಾಹಿ ಗರಗಮಲ್ಲಪ್ಪ ಅವರಿಗೆ ಸೇರಿದ ಕುರಿಹಿಂಡು ಜಿ. ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಲಕುಂದಿ ಗ್ರಾಮದ ಸಮೀಪದ ಹೊಲದಲ್ಲಿ ಬೀಡು ಬಿಟ್ಟಿತ್ತು. ರಾತ್ರಿ ವೇಳೆಯಲ್ಲಿ ಕುರಿಮರಿಗಳನ್ನು ಒಂದು ಕಡೆ ಗುಂಪಾಗಿ ಸಂಗ್ರಹಿಸಿದ್ದರು. ಬುಧವಾರ ರಾತ್ರಿ ಬ್ಯಾಲಕುಂದಿ ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಕುರಿಗಾಹಿ ಪುರುಷರು ಜಾತ್ರೆಗೆ ತೆರಳಿದ್ದರು. ಸ್ಥಳದಲ್ಲಿ ಕೇವಲ ಮಹಿಳೆಯರೇ ಇದ್ದರು.ರಾತ್ರಿ ವೇಳೆಯಲ್ಲಿ ಏಕಾಕಿಯಾಗಿ ಚಿರತೆಯೊಂದು ಕುರಿಮರಿಗಳ ಹಿಂಡಿಗೆ ನುಗ್ಗಿ ದಾಳಿ ನಡೆಸಿದಾಗ ಸುಮಾರು ₹3 ಲಕ್ಷ ಮೌಲ್ಯದದ 36 ಕುರಿಮರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಂದೇ ರಾತ್ರಿಯಲ್ಲಿ ಚಿರತೆ ದಾಳಿಗೆ 36 ಕುರಿಮರಿಗಳು ಬಲಿಯಾಗಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಜೀವ ಭಯದಿಂದ ತಮಗೆ ಚಿರತೆಯಿಂದ ಕುರಿಮರಿಗಳನ್ನು ರಕ್ಷಿಸಿಕೊಳ್ಳಲಾಗಿಲ್ಲ ಎಂದು ಕುರಿಗಾಹಿ ಮಹಿಳೆಯರು ಅಸಹಾಯತೆ ತೋಡಿಕೊಂಡರು. ಗರಗ, ಬ್ಯಾಲಕುಂದಿ, ಜಿ. ನಾಗಲಾಪುರ, ನಾಗಲಾಪುರ ತಾಂಡಾ, ಗೊಲ್ಲರಹಳ್ಳಿ, ಡಣಾಯನಕನಕೆರೆ, ದೇವಲಾಪುರ, ಗುಂಡು, ಗುಂಡಾ ತಾಂಡಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕೆಲ ತಿಂಗಳಿಂದ ಚಿರತೆಗಳು ಸಂಚರಿಸುತ್ತಿರುವುದರಿಂದ ಈ ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಎಲ್ಲ ಗ್ರಾಮಗಳ ಹೊರವಲಯದಲ್ಲಿ ಚಿರತೆ ಸೆರೆಹಿಡಿಯಲು ಬೋನ್ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಈ ಕುರಿತು ಹೊಸಪೇಟೆ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಅವರನ್ನು ಸಂಪರ್ಕಿಸಿದಾಗ ಬ್ಯಾಲಕುಂದಿ ಗ್ರಾಮ ಸಮೀಪದಲ್ಲಿ ಯಾವುದೋ ಪ್ರಾಣಿಗೆ ಕುರಿಮರಿಗಳು ಬಲಿಯಾಗಿವೆ. ಕುರಿಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರಣ್ಯ ಇಲಾಖೆಯ ನಿಯಮಾನುಸಾರ ಕುರಿಗಾಹಿಗಳಿಗೆ ಪರಿಹಾರ ಸಿಗಲಿದೆ. ಈ ಭಾಗದಲ್ಲಿ ಚಿರತೆಯ ಓಡಾಟ ಇರುವುದರ ಬಗ್ಗೆ ಸ್ಥಳೀಯರು ಹೇಳುತ್ತಾರೆ. ಸಾರ್ವಜನಿಕರು ರಾತ್ರಿ ವೇಳೆ ಒಬ್ಬಂಟಿಗಳಾಗಿ ಸಂಚರಿಸುವುದು ಸೂಕ್ತವಲ್ಲ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಬೋನ್ ಅಳವಡಿಸಲಾಗುವುದು ಎಂದು ಹೇಳಿದರು.