ಗೋಣಿಕೊಪ್ಪಲಿನಲ್ಲಿ 36 ಯೂನಿಟ್ ರಕ್ತ ಸಂಗ್ರಹ: ಕೆ.ಕೆ. ಸೋಮಯ್ಯ

| Published : May 18 2025, 11:49 PM IST / Updated: May 18 2025, 11:50 PM IST

ಗೋಣಿಕೊಪ್ಪಲಿನಲ್ಲಿ 36 ಯೂನಿಟ್ ರಕ್ತ ಸಂಗ್ರಹ: ಕೆ.ಕೆ. ಸೋಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಇತ್ತೀಚೆಗೆ ಮುಗಿದ ರಕ್ತದಾನ ಶಿಬಿರದಲ್ಲಿ ಒಟ್ಟು 36 ಯೂನಿಟ್‌ ರಕ್ತ ಸಂಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ಮುಗಿದ ರಕ್ತದಾನ ಶಿಬಿರದಲ್ಲಿ ಒಟ್ಟು 36 ಯೂನಿಟ್ ರಕ್ತ ಸಂಗ್ರಹವಾಗಿರುವುದಾಗಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕೆ.ಕೆ. ಸೋಮಯ್ಯ ತಿಳಿಸಿದ್ದಾರೆ.

ಇತ್ತೀಚೆಗೆ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಮತ್ತು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಗೋಣಿಕೊಪ್ಪಲು ಘಟಕದ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಕ್ತದಾನ ಶಿಬಿರ ಯಶಸ್ವಿಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಸರಣಿ ರಕ್ತದಾನ ಶಿಬಿರವನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕರ್ನಾಟಕ ವನ್ಯ ಜೀವಿ ಮಂಡಳಿ ಸದಸ್ಯ ಹಾಗೂ ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಂಕೇತ್ ಪೂವಯ್ಯ ಹಾಗೂ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್‌ ಗಣಪತಿ ಜಂಟಿಯಾಗಿ ಉದ್ಘಾಟಿಸಿದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ಕೊಡಗಿನಲ್ಲಿ ತಿಂಗಳಿಗೆ 500 ಯೂನಿಟ್ ರಕ್ತದ ಅಗತ್ಯವಿದ್ದು, ರೋಗಿಗಳಿಗೆ ಜೀವದಾನ ನೀಡಲು ರಕ್ತ ದಾಸ್ತಾನು ಅಗತ್ಯ ಎಂದು ಹೇಳಿದರು. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ರಕ್ತದಲ್ಲಿ ಶೇಖರಣೆಗೊಳ್ಳುವ ಕೊಬ್ಬಿನ ಅಂಶದಿಂದ ಮುಕ್ತಿದೊರೆಯುತ್ತದೆ ಎಂದು ಇದೇ ಸಂದರ್ಭ ಮಾಹಿತಿ ನೀಡಿದರು.

ಕೊಡಗು ಜಿಲ್ಲಾಸ್ಪತ್ರೆ ರಕ್ತ ನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ರಕ್ತದಾನ ಸದುಪಯೋಗದ ಬಗ್ಗೆ ಪೂರಕ ಮಾಹಿತಿ ನೀಡಿದರು.

ಇದೇ ಸಂದರ್ಭ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಪ್ರಮೋದ್‌ಗಣಪತಿ ಅವರು, ಮಾನವ ಜೀವ ಉಳಿಸಲು ರಕ್ತದಾನ ಅಗತ್ಯ. ಜಿಲ್ಲೆಯಲ್ಲಿ ರಕ್ತದಾನ ಸಂಗ್ರಹಕ್ಕೆ ಎಲ್ಲರೂ ಶಿಬಿರದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ವೇದಿಕೆಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಗೋಣಿಕೊಪ್ಪಲು ಘಟಕದ ಅಧ್ಯಕ್ಷ ಬಿ.ಎನ್. ಪ್ರಕಾಶ್, ಸೀನಿಯರ್ ಚೇಂಬರ್‌ನ ರಾಷ್ಟ್ರೀಯ ಸಂಯೋಜಕ ಎಂ.ಎನ್. ಉತ್ತಪ್ಪ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪಡಿಕಲ್ ಕುಸುಮಾವತಿ ಉಪಸ್ಥಿತರಿದ್ದರು. ಇದೇ ಸಂದರ್ಭ ಸಂಕೇತ್ ಪೂವಯ್ಯ ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.