ಸಾರಾಂಶ
ಸಂಡೂರು: ತಾಲೂಕಿನ ತೋರಣಗಲ್ಲ ಬಳಿ ಇರುವ ಜೆಎಸ್‌ಡಬ್ಲು ಸ್ಟೀಲ್ ಕಂಪನಿಗೆ (ಜಿಂದಾಲ್) ೩೬೬೭.೩೧ ಎಕರೆ ಜಮೀನನ್ನು ಶುದ್ಧ ಕ್ರಯ ಮಾಡಿಕೊಡಲು ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಜಿಂದಾಲ್ ಕಂಪನಿಗೆ ಗುತ್ತಿಗೆಗೆ ನೀಡಿದ್ದ ಜಮೀನನ್ನು ಶುದ್ಧ ಕ್ರಯಕ್ಕೆ ಕೊಡುವ ಸರ್ಕಾರದ ತೀರ್ಮಾನದ ಪ್ರತಿಯನ್ನು ಜಿಂದಾಲ್ ಹಳೆ ಗೇಟಿನ ಮುಂಭಾಗ ಶುಕ್ರವಾರ ಸಿಪಿಎಂ, ಡಿವೈಎಫ್‌ಐ ಸಂಘಟನೆಗಳ ಮುಖಂಡರು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಡಿವೈಎಫ್‌ಐ ಅಖಿಲ ಭಾರತ ಘಟಕದ ಅಧ್ಯಕ್ಷ ಎ.ಎ. ರಹೀಂ ಮಾತನಾಡಿ, ೨೦೦೬-೦೭ರಲ್ಲಿ ಜಿಂದಾಲ್ ಕಂಪನಿಗೆ ಗುತ್ತಿಗೆ ಮತ್ತು ಮಾರಾಟದ ಆಧಾರದ ಮೇಲೆ ಮಂಜೂರು ಮಾಡಿದ್ದ ತೋರಣಗಲ್ಲು ಮತ್ತು ಕುರೆಕುಪ್ಪ ಬಳಿಯ ೨೦೦೦ ಎಕರೆ ಜಮೀನಿಗೆ ಪ್ರತಿ ಎಕರೆಗೆ ₹೧.೨೨ ಲಕ್ಷದಂತೆ ಹಾಗೂ ತೋರಣಗಲ್ಲು, ಮುಸೇನಾಯಕನಹಳ್ಳಿ ಹಾಗೂ ಯರಬನಹಳ್ಳಿ ಗ್ರಾಮಗಳ ೧೬೬೬ ಎಕರೆ ಜಮೀನಿಗೆ ಪ್ರತಿ ಎಕರೆಗೆ ₹೧.೫೦ ಲಕ್ಷದಂತೆ ನಿಗದಿ ಮಾಡಿ ಕ್ರಯಕ್ಕೆ ನೀಡಲು ತೀರ್ಮಾನಿಸಿದ ಸಚಿವ ಸಂಪುಟದ ನಿರ್ಧಾರ ಖಂಡನೀಯ ಎಂದರು.
ಈ ಹಿಂದೆ ಜಿಂದಾಲ್ ಕಂಪನಿಗೆ ಜಮೀನನ್ನು ಮಾರಾಟ ಮಾಡುವುದನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಕಂಪನಿಗೆ ಜಮೀನು ಮಾರಾಟ ಮಾಡಲು ತೀರ್ಮಾನಿಸಿರುವುದು ಸರ್ಕಾರದ ಜನ ವಿರೋಧಿ ನಿಲುವು ತೋರಿಸುತ್ತದೆ ಎಂದು ಟೀಕಿಸಿದರು.ಪ್ರತಿಭಟನೆಯಲ್ಲಿ ಸಿಪಿಎಂ ತಾಲೂಕು ಘಟಕದ ಕಾರ್ಯದರ್ಶಿ ಎ.ಸ್ವಾಮಿ, ಸಿಐಟಿಯು ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಮುಖಂಡರಾದ ಕಾಲುಬಾ, ಶರೀಫ್, ಅರ್ಜುನ ಮತ್ತು ಶಿವರೆಡ್ಡಿ ಉಪಸ್ಥಿತರಿದ್ದರು.
ಕುಡುತಿನಿ ಭಾಗದಲ್ಲಿ ೨೦೧೦ರಲ್ಲಿಯೇ ಎಕರೆ ಜಮೀನಿಗೆ ₹೩೦ ಲಕ್ಷ ದರವನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ. ನಂತರ ನಡೆದ ಹೋರಾಟದ ಫಲವಾಗಿ ಬಡ್ಡಿ ಸೇರಿ ರೈತರಿಗೆ ಎಕರೆಗೆ ₹೧.೩೦ ಕೋಟಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಅತಿ ಕಡಿಮೆ ಬೆಲೆಗೆ ಜಿಂದಾಲ್ ಕಂಪನಿಗೆ ೩೬೬೭ ಎಕರೆ ಜಮೀನನ್ನು ಮಾರಾಟ ಮಾಡಲು ಹೊರಟಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ತುಂಬ ನಷ್ಟವಾಗಲಿದೆ. ಸರ್ಕಾರ ಕಂಪನಿಗೆ ಜಮೀನನ್ನು ಮಾರಾಟ ಮಾಡದೆ, ಗುತ್ತಿಗೆಯನ್ನು ಮುಂದುವರೆಸಬೇಕು ಎನ್ನುತ್ತಾರೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ.ಜಮೀನು ಮಾರಾಟದ ತೀರ್ಮಾನ ಮರುಪರಿಶೀಲಿಸಲಿ: ಶ್ರೀಶೈಲ ಆಲ್ದಳ್ಳಿಸಂಡೂರು: ಜಿಂದಾಲ್ ಕಂಪನಿಗೆ ಬೇಕಾಗಿರುವ ಜಮೀನು ಎಷ್ಟು? ಈಗಾಗಲೇ ಎಷ್ಟು ಜಮೀನು ನೀಡಲಾಗಿದೆ? ಎಂಬುದರ ಕುರಿತು ತನಿಖೆಯಾಗಬೇಕಿದೆ. ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಕ್ರಮವನ್ನು ಖಂಡಿಸಿ ೨೦೧೯ರಲ್ಲಿಯೇ ನಾವು ವಡ್ಡು ಗ್ರಾಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆಯನ್ನು ನಡೆಸಿದ್ದೆವು. ಈಗ ಕಂಪನಿಗೆ ಬೆಲೆ ಬಾಳುವ ಭೂಮಿಯನ್ನು ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿರುವ ಕ್ರಮವನ್ನು ನೋಡಿದರೆ, ಇಲ್ಲಿನ ನೆಲ, ಜಲ ರಕ್ಷಕರೆನಿಸಿಕೊಳ್ಳುವವರು ತಮ್ಮನ್ನು ಆ ರೀತಿ ಕರೆದುಕೊಳ್ಳಲು ಅರ್ಹರಲ್ಲ. ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡುವ ತೀರ್ಮಾನವನ್ನು ಮರುಪರಿಶೀಲಿಸಬೇಕು ಮತ್ತು ಗುತ್ತಿಗೆಯನ್ನು ಮುಂದುವರೆಸಬೇಕು ಎಂದು ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿಯ ಉಪಾಧ್ಯಕ್ಷ ಶ್ರೀಶೈಲ ಆಲ್ದಳ್ಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೈಗಾರಿಕೆಗೆ ಭೂಮಿ ನೀಡಿಕೆಗೆ ಖಂಡನೆಸಂಡೂರು: ಸರ್ಕಾರ ಜಿಂದಾಲ್ ಕಂಪನಿಗೆ ಫಲವತ್ತಾದ ಭೂಮಿಯನ್ನು ಮಾರಾಟ ಮಾಡುವ ಕ್ರಮವನ್ನು ನಾವು ಖಂಡಿಸುತ್ತೇವೆ. ಈ ಜಮೀನಿನಲ್ಲಿ ರೈತರಿಗೆ ಅನುಕೂಲವಾಗುವ ಉದ್ಯಮಗಳನ್ನು ಸ್ಥಾಪಿಸಲಿ. ಕೈಗಾರಿಕೆಯ ಭೂಮಿ ವಿಸ್ತರಿಸುತ್ತಾ ಸಾಗಿದರೆ, ಕೃಷಿ ಜಮೀನುಗಳು, ಗ್ರಾಮಗಳು ಕಣ್ಮರೆಯಾಗಿ ಜನತೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಕೆ. ನಾಯ್ಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.