ಸಿಹಿ ಪದಾರ್ಥ, ಅಕ್ಕಿ ಹಾಗೂ ಇತರೆ ಪದಾರ್ಥ ಸೇರಿಯೇ ಬರೋಬ್ಬರಿ 3817 ಕ್ವಿಂಟಲ್ ಆಹಾರ ಪದಾರ್ಥ ಬಳಕೆಯಾಗಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಈ ಬಾರಿಯ ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ನಿರೀಕ್ಷೆ ಮೀರಿ ಭಕ್ತರು, ಸಾರ್ವಜನಿಕರು ಆಗಮಿಸಿದ್ದು, ಎಲ್ಲವೂ ದಾಖಲೆಯ ಪ್ರಮಾಣದಲ್ಲಿಯೇ ದಾಖಲಾಗಿದೆ. 55 ಕ್ವಿಂಟಲ್ ಉಪ್ಪು ಬಳಕೆಯಾಗಿದ್ದರೆ 9 ಕ್ವಿಂಟಲ್ ಅರಿಶಿಣಪುಡಿ. 100 ಕ್ವಿಂಟಲ್ ಒಳ್ಳೆಣ್ಣೆ ಬಳಕೆಯಾಗಿದೆ. 1350 ಕ್ವಿಂಟಲ್ ಅಕ್ಕಿ, 1034 ಕ್ವಿಂಟಲ್ ಸಿಹಿಪದಾರ್ಥ ಬಳಕೆಯಾಗಿದೆ ಎಂದು ಲೆಕ್ಕ ಹಾಕಲಾಗಿದೆ.ಜ.1ರಿಂದ ಪ್ರಾರಂಭವಾದ ಮಹಾದಾಸೋಹ ಜ.18ರ ವರೆಗೂ ಸಾಂಗವಾಗಿ ನಡೆದಿದೆ. ಮೊದಲ ಐದು ದಿನ ಮಾತ್ರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದರೆ ರಥೋತ್ಸವ ಬಳಿಕ ಲಕ್ಷೋಪ ಲಕ್ಷ ಭಕ್ತರು ನಿತ್ಯವೂ ಪ್ರಸಾದ ಸ್ವೀಕರಿಸಿದ್ದಾರೆ.
ಸಿಹಿ ಪದಾರ್ಥ, ಅಕ್ಕಿ ಹಾಗೂ ಇತರೆ ಪದಾರ್ಥ ಸೇರಿಯೇ ಬರೋಬ್ಬರಿ 3817 ಕ್ವಿಂಟಲ್ ಆಹಾರ ಪದಾರ್ಥ ಬಳಕೆಯಾಗಿದೆ. ಇಷ್ಟೆಲ್ಲ ಸಿದ್ಧ ಮಾಡಲು ಬರೋಬ್ಬರಿ 600 ಕ್ವಿಂಟಲ್ ಕಟ್ಟಿಗೆ ಬಳಕೆಯಾಗಿದೆ. ಇನ್ನು 6 ಲಕ್ಷ ಮಿರ್ಚಿ ಮತ್ತು 20 ಲಕ್ಷ ರೊಟ್ಟಿ ಹಾಗೂ 12-15 ಲಕ್ಷ ಮೈಸೂರು ಪಾಕನ್ನು ಮಹಾ ಪ್ರಸಾದದಲ್ಲಿ ನೀಡಿದ್ದು ಪ್ರತ್ಯೇಕ.ಹೀಗೆ, ಲೆಕ್ಕ ಹಾಕುತ್ತ ಹೋದರೆ ಈ ಬಾರಿಯ ಮಹಾದಾಸೋಹದಲ್ಲಿ ಎಲ್ಲವೂ ದಾಖಲೆಯಷ್ಟು ಬಳಕೆಯಾಗಿದೆ. ಇದೆಲ್ಲವೂ ಬಹುತೇಕ ಭಕ್ತರು ಕೊಟ್ಟಿದ್ದೇ. ಸಿಹಿಪದಾರ್ಥ ಮತ್ತು ರೊಟ್ಟಿಯನ್ನು ಭಕ್ತರೇ ಸಿದ್ಧ ಮಾಡಿಕೊಂಡು ಬಂದು ಕೊಟ್ಟಿದ್ದಾರೆ. ಉಳಿದಂತೆಯೂ ಬಹುತೇಕ ಭಕ್ತರೇ ತಂದು ಕೊಟ್ಟಿದ್ದು, ಬರೋಬ್ಬರಿ 18-20 ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಲೆಕ್ಕಾಚಾರ: ಗವಿಸಿದ್ಧೇಶ್ವರ ಮಹಾಹಾದೋಸಹಕ್ಕೆ ಭಕ್ತರು ತಂದುಕೊಟ್ಟಿದ್ದೆಲ್ಲವನ್ನು ದಾಖಲೆ ಮಾಡಲಾಗಿದೆ. ಪ್ರತಿಯೊಂದನ್ನು ವಿವರವಾಗಿ ಬರೆದಿಡಲಾಗಿದೆ.ಇದನ್ನು ಮೀರಿಯೂ ಕೆಲ ಭಕ್ತರು ಕೆಜಿ, ನಾಲ್ಕಾರು ಕೆಜಿಯನ್ನು ನೇರವಾಗಿ ನೀಡಿದ್ದು ಮಾತ್ರ ಲೆಕ್ಕಕ್ಕೆ ಇಲ್ಲ.ಉಳಿದಂತೆ ಹತ್ತಾರು ಕೆಜಿಯಿಂದ ಹಿಡಿದು ಕ್ವಿಂಟಲ್ ಗಟ್ಟಲೇ ಕೊಟ್ಟಿದ್ದೆಲ್ಲವನ್ನು ಲೆಕ್ಕ ಹಾಕಲಾಗಿದೆ.ಪ್ರಸಾದ ವಿತರಣೆಗೆ ಖರ್ಚಾದ ಸಾಮಗ್ರಿಗಳ ವಿವರ
ತುಪ್ಪ 10 ಕ್ವಿಂಟಲ್, ಹಾಲು 5 ಸಾವಿರ ಲೀಟರ್, ಅರಿಶಿಣ ಪುಡಿ 900 ಕೆಜಿ, ಹರಳು ಉಪ್ಪು, ಸಣ್ಣ ಉಪ್ಪು 55 ಕ್ವಿಂಟಲ್, ಹಸಿ ಕಡ್ಲೆ ಹಿಟ್ಟು 35 ಕ್ವಿಂಟಲ್, ಜೀರಗಿ 385 ಕೆಜಿ, ಸಾಸಿವೆ ಕಾಳು 390 ಕೆಜಿ, ಜವಾರಿ ಬೆಳ್ಳುಳ್ಳಿ 1163 ಕೆಜಿ, ಎಂಟಿಆರ್ ಮಸಾಲ 396 ಕೆಜಿ, ಹುಣಸೆ ಹಣ್ಣು 22 ಕ್ವಿಂಟಲ್, ದಾಲ್ 375 ಕೆಜಿ, ಶೇಂಗಾ 15 ಕ್ವಿಂಟಲ್, ಉದ್ದಿನ ಬೆಳೆ 240 ಕೆಜಿ, ಕಡಲೆ ಬೆಳೆ 240 ಕೆಜಿ, ಕೊಬ್ಬರಿ ಪುಡಿ ೧ ಕ್ವಿಂಟಲ್, ಗಸಗಸೆ 15 ಕೆಜಿ, ಏಲಕ್ಕಿ 10 ಕೆಜಿ, ವಟಾಣಿ 60 ಕೆಜಿ, ಮಂಡಕ್ಕಿ 30 ಚೀಲ, ಸೊಡಾಪುಡಿ 30 ಕೆಜಿ, ಜಾಜಿಕಾಯಿ 10 ಕೆಜಿ, ಕೇಸರಿ ರವಾ 70 ಕ್ವಿಂಟಲ್ , ಗದಗ ಮಸಾಲಿ ಪುಡಿ 6 ಕ್ವಿಂಟಲ್, ತೊಗರಿ ಬೆಳೆ 300 ಕ್ವಿಂಟಲ್, ಹೆಸರ ಕಾಳು 150 ಕ್ವಿಂಟಲ್, ಅಲಸಂದಿ ಕಾಳು 15 ಕ್ವಿಂಟಲ್, ಬೆಲ್ಲ 112 ಕ್ವಿಂಟಲ್, ಉಪ್ಪಿನಕಾಯಿ 120 ಕ್ವಿಂಟಲ್, ಕಾರಪುಡಿ 40 ಕ್ವಿಂಟಲ್, ಪುಟಾಣಿ 450 ಕ್ವಿಂಟಲ್, ಒಳ್ಳೆಣ್ಣಿ 100 ಕ್ವಿಂಟಲ್, ಅಕ್ಕಿ 1350 ಕ್ವಿಂಟಲ್, ರೊಟ್ಟಿ 20 ಲಕ್ಷ, ಮಿರ್ಚಿ 6 ಲಕ್ಷ, ಚಕ್ಕಲಿ 2 ಕ್ವಿಂಟಲ್, ಸಂಡಿಗೆ 3 ಲಕ್ಷ.ಸಿಹಿ ಪದಾರ್ಥ: ಮಾದಲಿ 300 ಕ್ವಿಂಟಲ್, ಬೂಂದಿ 163 ಕ್ವಿಂಟಲ್, ಮೈಸೂರುಪಾಕ 210 ಕ್ವಿಂಟಲ್, ಶೇಂಗಾ ಹೋಳಿಗೆ 75 ಕ್ವಿಂಟಲ್, ಜಿಲೆಬಿ 5 ಕ್ವಿಂಟಲ್, ರವಾ ಉಂಡಿ 61 ಕ್ವಿಂಟಲ್ , ಕರ್ಚಿಕಾಯಿ 21 ಕ್ವಿಂಟಲ್, ಶಂಕರಪಾಳೆ 10 ಕ್ವಿಂಟಲ್, ಸೋನಪಾಪಡಿ 3 ಕ್ವಿಂಟಲ್, ಕರದಂಟು 30 ಕ್ವಿಂಟಲ್, ಬೇಸನ್ ಉಂಡಿ 40 ಕ್ವಿಂಟಲ್, ಬಾದಮಿಪೂರಿ 1 ಕ್ವಿಂಟಲ್, ಬಾದುಷಾ 25 ಕ್ವಿಂಟಲ್, ತರಕಾರಿ 250 ಕ್ವಿಂಟಲ್, ಕಟ್ಟಿಗೆ 600 ಕ್ವಿಂಟಲ್