ರಾಜ್ಯದಲ್ಲಿ 3ನೇ ಪರ್ಯಾಯ ಶಕ್ತಿ ಅಗತ್ಯ: ಜಿ.ಬಿ.ವಿನಯ್‌

| Published : Nov 29 2024, 01:03 AM IST

ರಾಜ್ಯದಲ್ಲಿ 3ನೇ ಪರ್ಯಾಯ ಶಕ್ತಿ ಅಗತ್ಯ: ಜಿ.ಬಿ.ವಿನಯ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ: ರಾಜ್ಯದಲ್ಲಿ ಮೂರನೇ ರಾಜಕೀಯ ಪರ್ಯಾಯ ಶಕ್ತಿಯಾಗಿ ಸಂಚಲನ ಮೂಡಿಸಲು ಸ್ವಾಭಿಮಾನಿ ಬಳಗದಿಂದ ಶೀಘ್ರವೇ ಬೀದರ್‌ನಿಂದ ಚಾಮರಾಜ ನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌, ಐಪಿಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.

ದಾವಣಗೆರೆ: ರಾಜ್ಯದಲ್ಲಿ ಮೂರನೇ ರಾಜಕೀಯ ಪರ್ಯಾಯ ಶಕ್ತಿಯಾಗಿ ಸಂಚಲನ ಮೂಡಿಸಲು ಸ್ವಾಭಿಮಾನಿ ಬಳಗದಿಂದ ಶೀಘ್ರವೇ ಬೀದರ್‌ನಿಂದ ಚಾಮರಾಜ ನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌, ಐಪಿಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಬಹುತೇಕ ಕಡೆ ಸ್ವಾಭಿಮಾನಿ ಬಳಗದ ಚಟುವಟಿಕೆ ಗರಿಗೆದರುತ್ತಿವೆ. ಅಹಿಂದ ವರ್ಗದಲ್ಲಿ ಜಾಗೃತಿ ಮೂಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಳಿದ ನಂತರ ಅಹಿಂದ ವರ್ಗ ಚೆಲ್ಲಾಪಿಲ್ಲಿಯಾಗುತ್ತದೆಂಬ ಅರಿವು ಇದೆ. ಹಾಗಾಗಿ 3ನೇ ಪರ್ಯಾಯ ಶಕ್ತಿ, ಫೋರ್ಸ್‌ನ ಅಗತ್ಯವಿದೆ. ಅಂತಹ ಶಕ್ತಿ, ಫೋರ್ಸ್ ಆಗಿ ಸ್ವಾಭಿಮಾನಿ ಬಳಗ ಕೆಲಸ ಮಾಡಲಿದೆ ಎಂದರು. ಶಿಕ್ಷಣ, ಆರೋಗ್ಯ ಅಷ್ಟೇ ಅಲ್ಲ, ರಾಜ್ಯದ ರೈತರು, ಬಡವರು, ಕಡು ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಅಹಿಂದ ವರ್ಗದ ಧ್ವನಿಯಾಗಿ, ಎಲ್ಲಾ ವರ್ಗದ ಜನರ ಧ್ವನಿಯಾಗಿ ವೇದಿಕೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು. ಕುಟುಂಬ ರಾಜಕಾರಣ ಕುರಿತಂತೆ ಪ್ರಬಂಧ ಸ್ಪರ್ಧೆಕನ್ನಡಪ್ರಭ ವಾರ್ತೆ ದಾವಣಗೆರೆ

ಯುವಜನರು, ಸಾರ್ವಜನಿಕರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಲು ಹಾಗೂ ಓದುವ ಸಂಸ್ಕೃತಿ ಹುಟ್ಟು ಹಾಕಲು ಸ್ವಾಭಿಮಾನಿ ಬಳಗದಿಂದ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ಧಿಗೆ ಮಾರಕ ವಿಷಯದ ಕುರಿತಂತೆ ಪ್ರಬಂಧ ರಚನೆ ಸ್ಪರ್ಧೆ ಆಯೋಜಿಸಿರುವುದಾಗಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ವಿದ್ಯಾರ್ಥಿ, ಯುವ ಸಮೂಹ ಹಾಗೂ ಸಾರ್ವಜನಿಕರಿಗಾಗಿ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದು, ಸುಮಾರು 500ರಿಂದ 1 ಸಾವಿರ ಪದಗಳಲ್ಲಿ ಕನ್ನಡದಲ್ಲೇ, ಕೈ ಬರಹದವನ್ನು ಬರೆದು ಕಳಿಸಬೇಕು ಎಂದರು.

8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಒಂದು ವಿಭಾಗ, ಪದವಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮತ್ತೊಂದು ವಿಭಾಗ ಹಾಗೂ 25ರಿಂದ 35ರ ವಯೋಮಾನದ ನಾಗರಿಕರು, ಗೃಹಿಣಿಯರು ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ಇರುತ್ತದೆ. ಮೂರೂ ವಿಭಾಗದಲ್ಲೂ ಪ್ರಥಮ ಸ್ಥಾನಕ್ಕೆ 20 ಸಾವಿರ, 2ನೇ ಬಹುಮಾನ 10 ಸಾವಿರ ಹಾಗೂ 3ನೇ ಬಹುಮಾನ 5 ಸಾವಿರ ನಗದು ಬಹುಮಾನ ಇರುತ್ತದೆ. 500 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದು, ಪ್ರಬಂಧ ಬರೆದವರು ಡಿ.20ರ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಗುರುತಿನ ಪತ್ರದೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಇನ್‌ಸೈಟ್ಸ್‌ ಐಎಎಸ್ ತರಬೇತಿ ಸಂಸ್ಥೆ, ಜಾಧವ್ ಕಾಂಪ್ಲೆಕ್ಸ್‌, ಎಜು ಏಷ್ಯಾ ಶಾಲೆ ಮುಂಭಾಗ, ಜಿಲ್ಲಾಧಿಕಾರಿ ನಿವಾಸದ ಬಳಿ, ರಿಂಗ್ ರಸ್ತೆ, ಎಸ್.ನಿಜಲಿಂಗಪ್ಪ ಬಡಾವಣೆ, ದಾವಣಗೆರೆಗೆ ಕನ್ನಡದಲ್ಲಿ ಬರೆದ, ಕೈಬರಹದ ಪ್ರಬಂಧದ ಪ್ರತಿಗಗಳನ್ನು ನೀಡಬೇಕು. ಹೆಚ್ಚಿನ ಮಾಹಿತಿಗೆ ಮೊ-96063-88288, 63636-82537ಗೆ ಸಂಪರ್ಕಿಸುವಂತೆ ತಿಳಿಸಿದರು.

ವಿಜೇತರಿಗೆ ಬಹುಮಾನ ಹಾಗೂ ಸಮಾಧಾನಕಾರ ಬಹುಮಾನಗಳನ್ನು ಜನವರಿ ತಿಂಗಳ ಮೊದಲ ವಾರ ಕುವೆಂಪು ಭವನದಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು ಎಂದರು.

ಬಳಗದ ಶಿವಕುಮಾರ ಡಿ.ಶೆಟ್ಟರ್, ಕೆ.ಶಿವಕುಮಾರ, ಡಿ.ವಿರುಪಾಕ್ಷಪ್ಪ ಪಂಡಿತ್, ಪುರಂದರ ಲೋಕಿಕೆರೆ ಇತರರು ಇದ್ದರು.