- ದಿನವೀಡಿ ವೈವಿಧ್ಯಮಯ ಕಾರ್ಯಕ್ರಮಗಳು । ಜಿಲ್ಲಾ ಕಸಾಪ ಅಧ್ಯಕ್ಷ ಚನ್ನಶೆಟ್ಟಿ ಮಾಹಿತಿ । ಭುವನೇಶ್ವರಿ ತಾಯಿ ಮೆರವಣಿಗೆಕನ್ನಡಪ್ರಭ ವಾರ್ತೆ ಭಾಲ್ಕಿ
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಮಂಗಳವಾರ ಆ.11ರಂದು ಬೀದರ್ ಜಿಲ್ಲಾ ಮಟ್ಟದ ಮೂರನೆಯ ಮಹಿಳಾ ಸಮ್ಮೇಳನ ಜರುಗಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ಹೇಳಿದರು.ನಗರದ ರೈತ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಂಗಳವಾರ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಡಾ.ಗೀತಾ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ದಿನವೀಡಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 7.30 ಗಂಟೆಗೆ ಧ್ವಜರೋಹಣದೊಂದಿಗೆ ಸಮ್ಮೇಳನಕ್ಕೆ ವಿಧ್ಯುಕ್ತ ವಾಗಿ ಚಾಲನೆ ಸಿಗಲಿದೆ. ಬಳಿಕ ಚನ್ನಬಸವಾಶ್ರಮ ಪರಿಸರದಿಂದ ಬೆಳಿಗ್ಗೆ 8.30 ಗಂಟೆಗೆ ಸಮ್ಮೇಳನದಾಧ್ಯಕ್ಷೆ ಮಲ್ಲಮ್ಮ ಆರ್. ಪಾಟೀಲ್ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿ ಮೆರವಣಿಗೆ ನಡೆಯಲಿದೆ.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಧೀಶೆ ಸವಿತಾ ಗಂಗಾಧರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕಸಾಪ ಮಹಿಳಾ ನಗರ ಘಟಕದ ಅಧ್ಯಕ್ಷೆ ಸುನಿತಾ ಮಮ್ಮಾ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ನಗರದ ರೈತ ಕಲ್ಯಾಣ ಮಂಟಪದಲ್ಲಿ ನಾಡೋಜ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀ ನೇತೃತ್ವ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಮಲ್ಲಮ್ಮ ಆರ್ ಪಾಟೀಲ್ ಸಮ್ಮೇಳನಾಧ್ಯಕ್ಷರ ನುಡಿ ನುಡಿಯಲಿದ್ದಾರೆ.ಜಿಲ್ಲಾ ಮಟ್ಟದ ಎರಡನೆಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಾ ಕೆ ಪರಷತ್ತಿನ ಧ್ವಜ ಹಸ್ತಾಂತರಿಸಲಿದ್ದಾರೆ. ಸಂಸದ ಸಾಗರ ಖಂಡ್ರೆ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದು. ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ ಧನ್ಯ ಜೀವನ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದರು.
ಮಧ್ಯಾಹ್ನ 1.30ಗಂಟೆಗೆ ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ಜರುಗಲಿದೆ. ಬೀದರ್‌ನ ಕನ್ನಡ ಉಪನ್ಯಾಸಕಿ ಡಾ.ಸುರೇಖಾ ಬಿರಾದಾರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಡಿಗ್ಗೆ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30 ಗಂಟೆಗೆ ಸಂಕೀರಣ ಗೋಷ್ಠಿ ನಡೆಯಲಿದ್ದು ಬೀದರ್‌ನ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಪೂರ್ಣಿಮಾ ಜಿ ಅಧ್ಯಕ್ಷತೆ ವಹಿಸುವರು. ಡಾ.ಆರತಿ ನಿಜಲಿಂಗ ಪಾತ್ರೆ, ಪಾರ್ವತಿ ಸೋನಾರೆ, ಡಾ.ಶ್ರೇಯಾ ಮಹಿಂದ್ರಕರ್ ಉಪನ್ಯಾಸ ನೀಡುವರು.
ಸಾಯಂಕಾಲ 4.30 ಗಂಟೆಗೆ ಡಾ.ಗಂಗಾಂಬಿಕಾ ಅಕ್ಕ ಸಾನ್ನಿಧ್ಯದಲ್ಲಿ ಕವಿಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿ ರೇಖಾ ಮಹಾಜನ ಅಧ್ಯಕ್ಷತೆ ವಹಿಸುವರು. ಸಾಯಂಕಾಲ 6.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು ಸುರೇಶ್ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ನಡುವಳಿಕೆ ಮಂಡಿಸಲಿದ್ದಾರೆ.
ಸಂಜೆ 6.45ಕ್ಕೆ ಭಾತಂಬ್ರಾ ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಸನ್ಮಾನ ಮತ್ತು ಸಮಾರೋಪ ಸಮಾರಂಭ ಜರುಗಲಿದೆ. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷೆ ಡಾ.ಗೀತಾ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್ ಸಮಾರೋಪ ನುಡಿ ನುಡಿಯಲಿದ್ದಾರೆ. ಡಾ.ದೀಪಿಕಾ ರಾಣಿ ಪಾಟೀಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ. ವಿಜಯ ಪಟಗುಂದಿ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ತಾಲೂಕು ಕಸಾಪ ಉಪಾಧ್ಯಕ್ಷ ಅಶೋಕ ಬಾವುಗೆ, ನಗರ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ಯುವ ಘಟಕದ ಅಧ್ಯಕ್ಷ ಅಕ್ಷಯ ಮುದ್ದಾ, ಕಸಾಪ ನಗರ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಮಮ್ಮಾ, ಕಸಾಪ ಮಹಿಳಾ ತಾಲೂಕು ಅಧ್ಯಕ್ಷೆ ಚಂದ್ರಕಲಾ ಡಿಗ್ಗೆ, ಹಿರಿಯ ಸಾಹಿತಿ ರೇಖಾ ಮಹಾಜನ್, ಪ್ರಮುಖರಾದ ವಿಜಯಲಕ್ಷ್ಮೀ ಹೊಸಾಳೆ, ಪಾರ್ವತಿ ಡೋಣಗಾಪುರ, ಲಕ್ಷ್ಮೀ ಬೀರ್ಗೆ, ಗೀತಾ ಪಾಟೀಲ್, ಪಾರ್ವತಿ ಧುಮನಸೂರೆ, ಉಮಾದೇವಿ ಶಿವಣಕರ, ಶೃತಿ ಸಂತೋಷ ಪಾಟೀಲ್ ಇದ್ದರು.
--ಚಿತ್ರ 9ಬಿಡಿಆರ್58:
ಭಾಲ್ಕಿಯ ರೈತ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ನೇತೃತ್ವದಲ್ಲಿ ಮೂರನೆಯ ಮಹಿಳಾ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.