ಪಿಎಸ್‌ಎಸ್‌ಕೆಯಿಂದ ೪.೩೫ ಲಕ್ಷ ಟನ್ ಕಬ್ಬು ಅರೆತ...!

| Published : Oct 31 2025, 01:30 AM IST

ಸಾರಾಂಶ

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಸಮೂಹ ಸಂಸ್ಥೆಯ ಒಡೆತನಕ್ಕೆ ನೀಡಿದ ನಂತರ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕಿನ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಕಾರ್ಖಾನೆಯನ್ನು ಆರಂಭಿಸಿ ಸಮರ್ಪಕವಾಗಿ ಕಬ್ಬನ್ನು ಅರೆದು ನಿಗದಿತ ವೇಳೆಗೆ ಹಣ ಪಾವತಿಸುತ್ತಿರುವುದು ಈ ವ್ಯಾಪ್ತಿಯ ರೈತರಲ್ಲಿ ಖುಷಿ ತಂದಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಸಮೂಹ ಸಂಸ್ಥೆಯ ಒಡೆತನಕ್ಕೆ ನೀಡಿದ ನಂತರ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕಿನ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಕಾರ್ಖಾನೆಯನ್ನು ಆರಂಭಿಸಿ ಸಮರ್ಪಕವಾಗಿ ಕಬ್ಬನ್ನು ಅರೆದು ನಿಗದಿತ ವೇಳೆಗೆ ಹಣ ಪಾವತಿಸುತ್ತಿರುವುದು ಈ ವ್ಯಾಪ್ತಿಯ ರೈತರಲ್ಲಿ ಖುಷಿ ತಂದಿದೆ.

ಪ್ರಸ್ತುತ ಸಾಲಿನಲ್ಲಿ ಜು.೪ರಂದು ಕಾರ್ಖಾನೆ ಕಬ್ಬು ಅರೆಯುವಿಕೆ ಆರಂಭಿಸಿತು. ಈ ಹಂಗಾಮಿನಲ್ಲಿ ೫ ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಿತ್ತು. ಈ ಪೈಕಿ ಈವರೆಗೆ ೪.೩೫ ಲಕ್ಷ ಟನ್ ಕಬ್ಬನ್ನು ಅರೆದಿದೆ. ಪ್ರತಿ ಟನ್ ಕಬ್ಬಿಗೆ ೩೨೯೧ ರು. ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ೧೪೩.೧೫ ಕೋಟಿ ರು. ಹಣ ಪಾವತಿ ಮಾಡಿರುವುದು ರೈತ ಸಮುದಾಯದಲ್ಲಿ ಸಂತಸ ಮೂಡುವಂತೆ ಮಾಡಿದೆ.

ರೈತರು ಹಾಗೂ ಕಬ್ಬು ಸರಬರಾಜುದಾರರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸುವ ಮೂಲಕ ಕಾರ್ಖಾನೆ ಮೇಲಿನ ನಂಬಿಕೆ ಹಾಗೂ ವಿಶ್ವಾಸ ಹೆಚ್ಚಿಸಿ, ಪಕ್ಷಾತೀತವಾಗಿ ಸಹಕಾರ ಪಡೆದುಕೊಂಡು, ಕಾರ್ಖಾನೆಯನ್ನು ಸುಸ್ಥಿತಿಗೆ ಸಾಗಿಸುವಲ್ಲಿ ರೈತರಿಂದ ಯಶಸ್ವಿಯಾಗಿದೆ.

ನಿರಾಣಿ ಸಮೂಹ ಸಂಸ್ಥೆ ಕಾರ್ಖಾನೆಯನ್ನು ಉತ್ತಮವಾಗಿ ನಡೆಸುವುದರೊಂದಿಗೆ ರೈತರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚುವಂತೆ ಮಾಡಿದೆ. ಸರಿಯಾದ ಸಮಯಕ್ಕೆ ಕಾರ್ಖಾನೆಯನ್ನು ಆರಂಭಿಸಿ, ಸಮರ್ಪಕವಾಗಿ ಕಬ್ಬು ಅರೆದು ಅಷ್ಟೇ ಶೀಘ್ರವಾಗಿ ಹಣ ಪಾವತಿಸುತ್ತಾ ಕಬ್ಬು ಬೆಳೆಗಾರರಿಗೆ ನೆರವಾಗಿದೆ. ಶೇ.೮ಕ್ಕಿಂತಲೂ ಹೆಚ್ಚು ಇಳುವರಿ ಬರುತ್ತಿರುವುದರಿಂದ ಬೆಳೆಗಾರರು ಪೂರೈಸುವ ಕಬ್ಬಿಗೆ ಬೆಲೆಯೂ ಸಿಗುವಂತಾಗಿದೆ.

ಪಾಂಡವಪುರ, ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ರೈತರು ಸುಮಾರು ೧೮ ಸಾವಿರ ಎಕರೆ ವ್ಯಾಪ್ತಿಯ ಕಬ್ಬನ್ನು ನಿರಾಣಿ ಸಂಸ್ಥೆಯ ಕಾರ್ಖಾನೆಗೆ ಸಾಗಿಸಲಾಗಿದೆ. ಕಬ್ಬು ಕಟಾವು ವ್ಯವಸ್ಥೆಯಿಂದ ಆರಂಭವಾಗಿ ಕಾರ್ಖಾನೆಗೆ ಸಾಗಣೆ, ಅರೆಯುವಿಕೆಯವರೆಗೆ ಎಲ್ಲಿಯೂ ತೊಂದರೆಯಾಗದ ರೀತಿಯಲ್ಲಿ ಆಡಳಿತ ಮಂಡಳಿ ಕ್ರಮ ವಹಿಸಿದೆ. ಕಬ್ಬು ಬೆಳೆದ ರೈತರ ಕಬ್ಬು ಒಣಗುವುದಕ್ಕೆ ಅವಕಾಶವಾಗದಂತೆ ಕಬ್ಬು ಕಟಾವು ಮಾಡುವವರನ್ನು ನಿಗದಿತ ಸಮಯಕ್ಕೆ ಕರೆತಂದು ಕಟಾವು ಮಾಡಿಸಿ ಕಾರ್ಖಾನೆಗೆ ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ಕಬ್ಬು ಪೂರೈಸಿದ ರೈತರಿಗೆ ವಿಳಂಬವಾಗದಂತೆ ಹಣ ಪಾವತಿಸುತ್ತಿರುವುದರಿಂದ ರೈತರು ಬೇರೆ ಕಡೆಗೆ ಮುಖ ಮಾಡುವುದಕ್ಕೆ ಅವಕಾಶವೇ ಸಿಗದಂತಾಗಿದೆ.

ಸರ್ಕಾರಿ ಸ್ವಾಮ್ಯದಲ್ಲಿ ಪಿಎಸ್‌ಎಸ್‌ಕೆ ಕಾರ್ಯನಿರ್ವಹಿಸುವ ವೇಳೆ ನಷ್ಟದ ಕೂಪಕ್ಕೆ ಸಿಲುಕಿತ್ತು. ಇದರಿಂದ ಆಲೆಮನೆಯವರಿಗೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸಿತ್ತು. ಕಾರ್ಖಾನೆ ವ್ಯಾಪ್ತಿಯ ಬಹುತೇಕ ಕಬ್ಬು ಆಲೆಮನೆಗಳನ್ನು ಸೇರುತ್ತಿತ್ತು. ಆಲೆಮನೆ ಮಾಲೀಕರು ಕಡಿಮೆ ಬೆಲೆಗೆ ಕಬ್ಬನ್ನು ಖರೀದಿಸುತ್ತಿದ್ದರಿಂದ ರೈತರು ಆರ್ಥಿಕವಾಗಿ ನಷ್ಟಕ್ಕೊಳಗಾಗುತ್ತಿದ್ದರು.

ನಿರಾಣಿ ಸಮೂಹ ಸಂಸ್ಥೆ ವಹಿಸಿಕೊಂಡ ಮೊದಲ ವರ್ಷದಲ್ಲೇ ಕಾರ್ಖಾನೆ ಸುಗಮವಾಗಿ ಕಬ್ಬು ಅರೆಯುವ ಹಂತಕ್ಕೆ ತರುವಲ್ಲಿ ಯಶಸ್ವಿಯಾದರು. ಉತ್ತರ ಕರ್ನಾಟಕದಿಂದ ಕಾರ್ಮಿಕರನ್ನು ಕರೆತಂದು ಕಬ್ಬು ಅರೆಯುವಿಕೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು. ಕಬ್ಬು ಬೆಳೆದ ರೈತರು ಕೋರಮಂಡಲ್, ಬನ್ನಾರಿ ಅಮ್ಮನ್ ಕಾರ್ಖಾನೆ, ಕುಂತೂರು ಕಾರ್ಖಾನೆ ಸೇರಿದಂತೆ ಇತರೆ ಕಾರ್ಖಾನೆಗಳಿಗೆ ಪೂರೈಸುವುದನ್ನು ಬಿಟ್ಟು ಪಿಎಸ್‌ಎಸ್‌ಕೆ ಕಾರ್ಖಾನೆಗೆ ನೀಡುವುದಕ್ಕೆ ಮುಂದಾದರು. ನಿರಾಣಿ ಸಮೂಹ ಸಂಸ್ಥೆ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಈ ಭಾಗದ ಕಬ್ಬು ಬೆಳೆಗಾರರ ಸಮಸ್ಯೆಗೆ ಇತಿಶ್ರೀ ಹಾಡಿದಂತಾಗಿದೆ.ರೈತರ ನಂಬಿಕೆ ಉಳಿಸಿಕೊಂಡು ಕಾರ್ಖಾನೆ ನಡೆಸುವುದು ಸುಲಭದ ಮಾತಲ್ಲ. ಇಂತಹ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಪಿಎಸ್ ಎಸ್ ಕೆ ಕಾರ್ಖಾನೆಯನ್ನು ತಾಂತ್ರಿಕವಾಗಿ ಬಲಿಷ್ಟಗೊಳಿಸಿ, ಕಬ್ಬು ಅರೆಯುವಿಕೆ ಪ್ರಮಾಣವನ್ನು ಹೆಚ್ಚಿಸಕೊಳ್ಳುತ್ತಾ, ಸಮರ್ಪಕವಾಗಿ ಕಬ್ಬು ಅರೆಯುವಿಕೆ ನಡೆಸಿರುವುದು ರೈತರಿಗೆ ಸದುಪಯೋಗ ಆಗುತ್ತಿದೆ.

- ಸೀತಾಪುರ ರಮೇಶ್, ರೈತಪಿಎಸ್ ಎಸ್ ಕೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಆತಂಕದಲ್ಲಿದ್ದ ರೈತರಿಗೆ ನೆರವಾಗಿದ್ದು ಮುರುಗೇಶ್ ನಿರಾಣಿ ನೇತೃತ್ವದ ಎಂಆರ್ ಎನ್ ಸಮೂಹ ಸಂಸ್ಥೆ ಬಂಡವಾಳ ಹೂಡಿತ್ತು. ಪ್ರಸ್ತುತವಾಗಿ ಕಾರ್ಖಾನೆ ಬಹಳ ಉನ್ನತ ಮಟ್ಟದಲ್ಲಿ ನಡೆಸಲಾಗುತ್ತಿದೆ. ಕಬ್ಬು ಬೆಳೆಗಾರರಿಗೆ ತೊಂದರೆ ಆಗದಂತೆ ನಿರ್ವಹಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

- ಇಂದ್ರಕುಮಾರ್, ಅಧ್ಯಕ್ಷ, ಒಕ್ಕಲಿಗರ ಸಂಘ, ಶ್ರೀರಂಗಪಟ್ಟಣ