ರಾಜ್ಯದಲ್ಲಿ ವಾರ್ಷಿಕ ೪.೫ ಲಕ್ಷ ಅರ್ಜಿ ಸ್ವೀಕಾರ: ಆಶಿತ್ ಮೋಹನ್ ಪ್ರಸಾದ್

| Published : Sep 22 2025, 01:00 AM IST

ರಾಜ್ಯದಲ್ಲಿ ವಾರ್ಷಿಕ ೪.೫ ಲಕ್ಷ ಅರ್ಜಿ ಸ್ವೀಕಾರ: ಆಶಿತ್ ಮೋಹನ್ ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಹಿತಿ ಹಕ್ಕು ಅಧಿನಿಯಮವನ್ನು ಅನುಷ್ಠಾನಗೊಳಿಸಿ ೨೦ ವರ್ಷವಾಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಕಳುಹಿಸಿಕೊಡುವಂತೆ ಸೂಚಿಸಿದ ಅವರು, ಅಕ್ಟೋಬರ್ ೧೨ಕ್ಕೆ ೨೦ ವರ್ಷಗಳು ಪೂರೈಸಲಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯೋಗವು ರಾಜ್ಯಮಟ್ಟದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಪರಿಣಾಮಾಕಾರಿ ಅನುಷ್ಠಾನದ ಬಗ್ಗೆ ಕಾರ್ಯಕ್ರಮ ಆಯೋಜಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದಲ್ಲಿ ಪ್ರತಿ ವರ್ಷ ಸರಾಸರಿ ೬೦ ಲಕ್ಷ ಆರ್‌ಟಿಐ ಅರ್ಜಿ ಹಾಗೂ ರಾಜ್ಯದಲ್ಲಿ ಸರಾಸರಿ ೪.೫ ಲಕ್ಷ ಅರ್ಜಿ ಸ್ವೀಕೃತವಾಗುತ್ತದೆ. ಇದರಲ್ಲಿ ೨೫೦೦೦ ಅರ್ಜಿಗಳು ಎರಡನೇ ಮೇಲ್ಮನವಿ ಆಯೋಗಕ್ಕೆ ಬರುತ್ತದೆ ಎಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಆಶಿತ್ ಮೋಹನ್ ಪ್ರಸಾದ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸ್ವಯಂ ಸೇವಾ ಸಂಸ್ಥೆ ಮೂಲಕ ಮಾಹಿತಿ ಹಕ್ಕು ಅಧಿನಿಯಮದ ಉಪಯುಕ್ತತೆಯ ಬಗ್ಗೆ ಸರ್ವೆ ನಡೆಸಲಾಗಿದ್ದು, ೪೫ ರಿಂದ ೫೦ ಪ್ರತಿಶತ ಜನಗಳಿಗೆ ಉಪಯುಕ್ತವಾಗಿರುವುದು ಕಂಡುಬಂದಿದೆ ಎಂದರು.

ಮಾಹಿತಿ ಹಕ್ಕು ಅಧಿನಿಯಮವನ್ನು ಅನುಷ್ಠಾನಗೊಳಿಸಿ ೨೦ ವರ್ಷವಾಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಕಳುಹಿಸಿಕೊಡುವಂತೆ ಸೂಚಿಸಿದ ಅವರು, ಅಕ್ಟೋಬರ್ ೧೨ಕ್ಕೆ ೨೦ ವರ್ಷಗಳು ಪೂರೈಸಲಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯೋಗವು ರಾಜ್ಯಮಟ್ಟದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಪರಿಣಾಮಾಕಾರಿ ಅನುಷ್ಠಾನದ ಬಗ್ಗೆ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ಮಾಹಿತಿ ಹಕ್ಕು ಅಧಿನಿಯಮದಡಿ ಹೆಚ್ಚು ಅರ್ಜಿ ಸ್ವೀಕರಿಸುವ ಕಚೇರಿಗಳು ಲೋಕ್ ಅದಾಲತ್ ಮಾದರಿಯಲ್ಲಿ ಒಂದು ದಿನ ನಿಗದಿಪಡಿಸಿಕೊಂಡು ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಇದರಿಂದ ಬಹಳಷ್ಟು ಅರ್ಜಿಗಳು ಆಯೋಗದ ಬಳಿ ಬರುವುದಿಲ್ಲ ಎಂದು ಸೂಚನೆ ನೀಡಿದರು.

ಮಾಹಿತಿ ಹಕ್ಕು ಅಧಿನಿಯಮದ ೪(೧)ಎ ಮತ್ತು ೪(೧) ಬಿ ವಿವರವನ್ನು ಪ್ರಕಟಿಸಬೇಕು. ಇದರಿಂದ ಬಹಳಷ್ಟು ಮಾಹಿತಿಯನ್ನು ಸಾರ್ವಜನಿಕರು ಪಡೆಯಲು ಅನುಕೂಲವಾಗಲಿದೆ. ಮಾಹಿತಿ ಹಕ್ಕು ನಿಯಮದಲ್ಲಿ ನೀಡಬೇಕಿರುವ ಹಾಗೂ ಗೌಪ್ಯತೆ ಕಾಪಾಡುವ ದಾಖಲೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದರಂತೆ ಅನುಸರಿಸಿ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲೆಯಲ್ಲಿ ೨೦೨೪-೨೫ ರಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕೃತವಾದ ಹಾಗೂ ವಿಲೇವಾರಿಯಾದ ಅರ್ಜಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಾಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.