ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹೇಮಾವತಿ ಜಲಶಯದ ಎಡದಂಡೆ ಮುಖ್ಯ ನಾಲೆ ಏರಿ ಉದ್ದಕ್ಕೂ ತಡೆಗೋಡೆ ನಿರ್ಮಿಸುವ ಹೆಸರಿನಲ್ಲಿ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಪರಸ್ಪರ ಶಾಮೀಲಾಗಿ 4.78 ಕೋಟಿ ರು. ಲೂಟಿ ಮಾಡಿದ್ದರೂ ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಸಾಮಾಜಿಕ ಹೋರಾಟಗಾರ ಜಯಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಾಂಡವಪುರ ತಾಲೂಕಿನ ತಿಬ್ಬನಹಳ್ಳಿಯ ಬಳಿ ಇತ್ತೀಚೆಗೆ ತಡೆಗೋಡೆ ಇಲ್ಲದ ವಿ.ಸಿ.ನಾಲೆಗೆ ಕಾರು ಬಿದ್ದು ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಎಡದಂಡೆ ಮುಖ್ಯ ಕಾಲುವೆ ಅಧುನೀಕರಣದ ವೇಳೆ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಹೇಮಾವತಿ ನಾಲೆ ಸರಪಳಿ 72.260 ರಿಂದ 214.300 ರವರೆಗೆ ಕಾಲುವೆಯ ಉದ್ದಕ್ಕೂ ಯಾವುದೇ ತಡೆಗೋಡೆ ನಿರ್ಮಿಸದಿದ್ದರೂ ತಡೆಗೋಡೆ ನಿರ್ಮಿಸಿರುವುದಾಗಿ ಹೇಳಿ 4.78 ಕೋಟಿ ಬಿಲ್ ಮಾಡಿಕೊಂಡಿದ್ದು ಸಾರ್ವಜನಿಕರ ಹಣವನ್ನು ತಿಂದು ತೇಗಿದ್ದಾರೆ ಎಂದು ದೂರಿದರು.ಈ ಕುರಿತು ಜಿಲ್ಲಾಧಿಕಾರಿಗಳು ಸೇರಿದಂತೆ ಮುಖ್ಯಮಂತ್ರಿಗಳವರೆಗೆ ರಾಜ್ಯ ರೈತಸಂಘದ ಸಹಕಾರದೊಂದಿಗೆ ಲಿಖಿತ ದೂರು ನೀಡಿದ್ದರೂ ಸರ್ಕಾರ ಇದುವರೆಗೂ ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ಕಾಲುವೆ ಏರಿ ಮೇಲೆ ರಕ್ಷಣಾ ಕಲ್ಲುಗಳ ಅಳವಡಿಕೆ ಮಾಡಿಸಿಲ್ಲ ಎಂದರು.
ವಿ.ಸಿ. ನಾಲೆಯ ದುರಂತದಂತೆ ಹೇಮಾವತಿ ಜಲಾಶಯದ ಮುಖ್ಯ ಕಾಲುವೆಯ ಮೇಲೂ ಜನ ಬಿದ್ದು ಸಾಯುವ ಮುನ್ನ ರಾಜ್ಯ ಸರ್ಕಾರ ಕಾಮಗಾರಿ ನಡೆಸದಿದ್ದರೂ ಅಕ್ರಮವಾಗಿ ಬಿಲ್ ಪಾವತಿಸಿರುವ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸಿ ನಾಲಾ ಏರಿಯ ಮೇಲೆ ರಕ್ಷಣಾ ತಡೆಗಲ್ಲುಗಳನ್ನು ಅಳವಡಿಸುವಂತೆ ಜಯಣ್ಣ ಒತ್ತಾಯಿಸಿದರು.ತಾಲೂಕಿನ ಬೀರುವಳ್ಳಿ ಗ್ರಾಪಂ ವ್ಯಾಪ್ತಿಯ ಮಂದಗೆರೆ ಬಲದಂಡೆ ನಾಲೆ ಪಕ್ಕದಲ್ಲಿ ಸುಪ್ರಸಿದ್ಧ ಚಂದುಗೋನಹಳ್ಳಿ ಅಮ್ಮನವರ ದೇವಾಲಯವಿದೆ. ಈ ದೇವಾಲಯದಕ್ಕೆ ವಾರದ ದಿನಗಳಾದ ಮಂಗಳವಾರ, ಶುಕ್ರವಾರ, ಭಾನುವಾರ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತದೆ. ಈ ಪ್ರದೇಶದಲ್ಲಿ ನಾಲಾ ಏರಿಯ ಮೇಲೆ ರಕ್ಷಣಾ ತಡಗೋಡೆ ನಿರ್ಮಿಸುವತ್ತ ಇದುವರೆಗೂ ನೀರಾವರಿ ಇಲಾಖೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ತಾಲೂಕಿನ ವಿಠಲಾಪುರ ಗ್ರಾಮದ ತಿರುವಿನಲ್ಲಿ ಹಾದು ಹೋಗಿರುವ ಕಾಲುವೆಗೂ ತಡೆಗೋಡೆಯಿಲ್ಲ. ತಾಲೂಕಿನ ಸುಪ್ರಸಿದ್ದ ಭೂವರಾಹನಾಥ ಕ್ಷೇತ್ರಕ್ಕೆ ಹೋಗುವ ವಾಹನಗಳು ಇದೇ ಕಾಲುವೆ ಏರಿ ಮೇಲೆ ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ ಎಂದರು.ಈ ಭಾಗದಲ್ಲಿ ಕಾಲುವೆ ಸುಮಾರು 30 ಅಡಿಗಳಿಗೂ ಅಧಿಕ ಅಳದಲ್ಲಿ ಹರಿಯುತ್ತಿದೆ. ಯಾವುದಾದರೂ ವಾಹನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದರೆ ಯಾರೊಬ್ಬರೂ ಬದುಕುವುದು ಸಾಧ್ಯವಿಲ್ಲ. ತಕ್ಷಣವೇ ತಾಲೂಕಿನಾದ್ಯಂತ ಜನಸಂಚಾರ ಹೆಚ್ಚಳ ಇರುವ ಕಾಲುವೆ ಏರಿಗಳನ್ನು ಗುರುತಿಸಿ ರಕ್ಷನಾ ತಡಗೋಡೆಗೋಡೆಗಳು ಮತ್ತು ಎಚ್ಚರಿಕೆಯ ಸರಕ್ಷತಾ ಫಲಕಗಳನ್ನು ಅಳವಡಿಸಿ ಮುಂದೆ ಒದಗಬಹುದಾದ ಅಪಾಯಗಳನ್ನು ತಡೆಗಟ್ಟಬೇಕಾಗಿದೆ ಎಂದು ಆಗ್ರಹಿಸಿದರು.