ಕಲ್ಲು ತೂರಾಟದ 4 ಕೇಸ್‌ ದಾಖಲು, 30 ಬಂಧನ: ಎಡಿಜಿಪಿ

| Published : Sep 21 2024, 01:56 AM IST

ಸಾರಾಂಶ

ಶ್ರೀ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಇದುವರೆಗೆ 30 ಜನರನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಸಿಸಿ ಟಿವಿ ಫುಟೇಜ್‌ಗಳ ಆಧಾರದಲ್ಲಿ ಪತ್ತೆ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆರ್.ಹಿತೇಂದ್ರ ಹೇಳಿದ್ದಾರೆ.

- ಇಬ್ಬರು ಪೊಲೀಸರಿಗೆ, ಮೌಲ್ವಿಗೆ ಗಾಯ । ಬಿಯರ್ ಬಾಟಲಿಗಳು, ಸಿಸಿ ಟಿವಿ ಫುಟೇಜ್ ಆಧರಿಸಿ ಶೋಧ

- ಸದ್ಯಕ್ಕೆ ದಾವಣಗೆರೆಯಲ್ಲಿ ಪರಿಸ್ಥಿತಿ ನಿಯಂತ್ರಣ, ಬಿಗಿ ಪೊಲೀಸ್‌ ಬಂದೋಬಸ್ತ್ ಮುಂದುವರಿಯಲಿದೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಶ್ರೀ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಇದುವರೆಗೆ 30 ಜನರನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಸಿಸಿ ಟಿವಿ ಫುಟೇಜ್‌ಗಳ ಆಧಾರದಲ್ಲಿ ಪತ್ತೆ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆರ್.ಹಿತೇಂದ್ರ ಹೇಳಿದರು.

ನಗರಕ್ಕೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಅರಳೀಮರ ವೃತ್ತದ ಬಳಿ ಗುರುವಾರ ಸಂಜೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ ಎಂದರು.

4 ತಂಡಗಳ ರಚನೆ:

ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ. ಈ ಪೈಕಿ 2 ಪ್ರಕರಣಗಳು ಪೊಲೀಸ್ ಇಲಾಖೆಯಿಂದ ದಾಖಲಾದ ಸ್ವಯಂಪ್ರೇರಿತ ದೂರುಗಳಾಗಿವೆ. ನಾಲ್ಕೂ ಪ್ರಕರಣಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಂತೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಘಟನೆಯಲ್ಲಿ ಓರ್ವ ಮೌಲ್ವಿಗೆ ಗಾಯವಾಗಿದೆ ಎಂಬುದಾಗಿ ದೂರು ನೀಡಿದ್ದಾರೆ. ಸದ್ಯಕ್ಕೆ ದಾವಣಗೆರೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಶಾಂತಿ ನೆಲೆಸಿದೆ ಎಂದು ಅವರು ತಿಳಿಸಿದರು.

ಇನ್ನೂ ಸ್ವಲ್ಪ ದಿನಗಳ ಕಾಲ ಇಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮುಂದುವರಿಯಲಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮುಖಂಡರೊಬ್ಬರ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೆರವಣಿಗೆ ವೇಳೆ ದಾವಣಗೆರೆಯಲ್ಲಿ ಗುರುವಾರ ಆದ ಗಲಾಟೆಯಲ್ಲಿ ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ಇಲ್ಲ. ಇದೊಂದು ಪೂರ್ವ ನಿಯೋಜಿತ ಘಟನೆ ಅಲ್ಲ. ತತ್‌ಕ್ಷಣಕ್ಕೆ ಪ್ರಚೋದನೆಯಿಂದ ಆಗಿರಬಹುದಾದ ಘಟನೆ ಎಂದು ಎಡಿಜಿಪಿ ಆರ್.ಹಿತೇಂದ್ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ರಮೇಶ ಬಾನೋಟ್‌, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಇತರರು ಇದ್ದರು.

- - -

ಕೋಟ್‌ ದಾವಣಗೆರೆಯಲ್ಲಿ ಅ.5ರಂದು ನಡೆಯುವ ಗಣೇಶ ವಿಸರ್ಜನೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಗುವುದು - ಆರ್.ಹಿತೇಂದ್ರ, ಎಡಿಜಿಪಿ

- - - -20ಕೆಡಿವಿಜಿ7:

ದಾವಣಗೆರೆಯಲ್ಲಿ ಎಡಿಜಿಪಿ ಆರ್.ಹಿತೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.