ತಾಲೂಕಿನ ಕ್ರೀಡಾ ಪಟುಗಳಿಗಾಗಿ ತಾಲಿಮು ಕೊಠಡಿ, ಒಳಾಂಗಣ ಕ್ರೀಡಾಂಗಣ, ಸಿಂಥೆಟಿಕ್ ಟ್ರಾಕ್. ಸೇರಿದಂತೆ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಕ್ರೀಡಾಂಗಣ ಅಭಿವೃದ್ಧಿಗೆ ಈಗಾಗಲೇ ೪ ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಂಗಣವಾಗಲಿದೆ ಎಂದು ಶಾಸಕ ಸಿ. ಬಿ.ಸುರೇಶ್ ಬಾಬು ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನ ಕ್ರೀಡಾ ಪಟುಗಳಿಗಾಗಿ ತಾಲಿಮು ಕೊಠಡಿ, ಒಳಾಂಗಣ ಕ್ರೀಡಾಂಗಣ, ಸಿಂಥೆಟಿಕ್ ಟ್ರಾಕ್. ಸೇರಿದಂತೆ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಕ್ರೀಡಾಂಗಣ ಅಭಿವೃದ್ಧಿಗೆ ಈಗಾಗಲೇ ೪ ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಂಗಣವಾಗಲಿದೆ ಎಂದು ಶಾಸಕ ಸಿ. ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ದೇಶೀಯ ವಿದ್ಯಾಪೀಠ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲೂ ಭಾಗವಹಿಸಿ ಉತ್ತಮ ಅರೋಗ್ಯ ಪಡೆಯಿರಿ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ನಿರಂತರ ಪ್ರಯತ್ನದಿಂದ ಸಾಧನೆ ಮಾಡುತ್ತೇವೆ. ನೀವು ಮಾನಸಿಕವಾಗಿ ಕುಗ್ಗದೆ ಧೈರ್ಯವಾಗಿ ಪಾಲ್ಗೊಂಡು ಸಾಧನೆ ಮಾಡಿ ಎಂದರು. ತಹಸೀಲ್ದಾರ್ ಮಮತಾ ಎಂ ಮಾತನಾಡಿ, ಸೋತಾಗ ಕುಗ್ಗುವುದು ಗೆದ್ದಾಗ ಹಿಗ್ಗುವುದು ಮಾಡದೆ ಸೋಲು ಗೆಲುವನ್ನು ಸಮಾಂತರವಾಗಿ ಸ್ವೀಕರಿಸಿ ದೈಹಿಕ ಸದೃಢತೆಯೊಂದಿಗೆ ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಿ. ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಿ ಧನಾತ್ಮಕವಾಗಿ ಸ್ಪಂದಿಸಿ ಎಂದರು.ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್‌ ಮಾತನಾಡಿ ಹೋಬಳಿಗಳ ಕ್ರೀಡಾಕೂಟ ಸೇರಿದಂತೆ ತಾಲೂಕುಮಟ್ಟದ, ದಸರಾ ಕ್ರೀಡಾಕೂಟಗಳು ಈ ಕ್ರೀಡಾಂಗಣದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲ. ತಾಲೀಮು ಕೊಠಡಿ ಇಲ್ಲ. ನೆರಳಿನ ವ್ಯವಸ್ಥೆ ಇಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಬಿಇಒ ಕಾಂತರಾಜು ಸಿ.ಎಸ್ ಮಾತನಾಡಿ ಈ ಕ್ರೀಡಾಂಗಣದಲ್ಲಿ ಈಗಾಗಲೇ ಮೂರು ಹೋಬಳಿ ಮಟ್ಟದ ಕ್ರೀಡಾಕೂಟಗಳು ನೆಡೆಸಿದೆ. ಈ ಕ್ರೀಡಾಂಗಣ ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಮೈದಾನಗಳಿದ್ದು ಅಲ್ಲಿನ ಕ್ರೀಡಾಂಗಣ ಅಭಿವೃದ್ದಿ ಪಡಿಸಿದರೆ ಹೋಬಳಿ ಮಟ್ಟದ ಕ್ರೀಡಾಕೂಟಗಳು ಅಲ್ಲಿಯೇ ನಡೆಸಲು ಸಾಧ್ಯವಾಗುತ್ತದೆ ಎಂದರು. ಮಾಜಿ ಪುರಸಭಾ ಸದಸ್ಯ ನೀಡಿ ಸುರೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಗವಿರಂಗಯ್ಯ, ವಿದ್ಯಾಸಂಸ್ಥೆಯ ನಿರ್ದೇಶಕ ಸಿ.ಎಂ.ರಂಗಸ್ವಾಮಿ, ಗಂಗಾಧರ್, ನಂದೀಶ್‌ಬಟ್ಲೇರಿ, ದೇಶೀಯ ವಿದ್ಯಾಪೀಠ ಶಾಲೆಯ ಮುಖ್ಯ ಶಿಕ್ಷಕ ಅರುಣ್ ಸೇರಿದಂತೆ ಇತರರು ಇದ್ದರು.