ಹಾನಗಲ್ಲ: ಹಾನಗಲ್ಲಿನ ಆರಾಧ್ಯ ದೈವ ಗ್ರಾಮದೇವಿಯ (ದ್ಯಾಮವ್ವ) ನೂತನ ಶಿಲಾ ದೇವಸ್ಥಾನ ೪ ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಕಲ ಸಿದ್ಧತೆ ನಡೆದಿದೆ ಎಂದು ದೇವಸ್ಥಾನ ಸಮಿತಿ ಕೋಶಾಧ್ಯಕ್ಷ ರಾಜು ಗುಡಿ ತಿಳಿಸಿದರು.
ಮಂಗಳವಾರ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ.೧೮ರಿಂದ ೨೦ರ ವರೆಗೆ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ದೇವಸ್ಥಾನ ಲೋಕಾರ್ಪಣೆಗೆ ಹಾನಗಲ್ಲು ಸಜ್ಜಾಗುತ್ತಿದೆ.ಆ.೧೮ರಂದು ಬೆಳಗ್ಗೆ ಧಾರ್ಮಿಕ ಕಾರ್ಯಗಳ ನಂತರ ಗ್ರಾಮದೇವಿಯ ಉತ್ಸವ ಮೂರ್ತಿಯ ಶೋಭಾ ಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ೧೦೦೧ ಸುಮಂಗಲೆಯರಿಂದ ಕುಂಭ ಮೇಳವೂ ನಡೆಯಲಿದೆ. ನಂತರ ಹೋಮ ಹವನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು.
ಆ.೧೯ರಂದು ಸಂಜೆ ೬ ಗಂಟೆಗೆ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಧರ್ಮ ಸಭೆಯಲ್ಲಿ, ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಪ್ರವಚನ ನಡೆಯಲಿದೆ. ಅಗಡಿಯ ವಿಶ್ವನಾಥ ಚಕ್ರವರ್ತಿಗಳು, ಬಿಜಕಲ್ಲ ಶಿವಲಿಂಗಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಅಧ್ಯಕ್ಷತೆವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಂಸದ ಶಿವಕುಮಾರ ಉದಾಸಿ ಹಾಗೂ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.೨೦ರಂದು ನೂತನ ಶಿಲಾ ದೇವಸ್ಥಾನದ ಲೋಕಾರ್ಪಣೆ, ಶ್ರೀದೀವಿ ವಿಗ್ರಹದ ನೇತ್ರೋಮಿಲನ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಗಳು ನಡೆಯುವವು. ಸಂಜೆ ೬ ಗಂಟೆಗೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳವರು, ಹೊಸದುರ್ಗದ ಶಾಂತವೀರ ಮಹಾಸ್ವಾಮಿಗಳು, ನರಸೀಪುರದ ಶಾಚಿತಭೀಷ್ಮ ಮಹಾಸ್ವಾಮಿಗಳು, ಚಿತ್ರದುರ್ಗದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬೆಂಗಳೂರಿನ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತೀ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮಸಭೆ ಜರುಗುವುದು.
೩ ಮೂರು ದಿನಗಳ ಕಾಲ ಮಹಾಪ್ರಸಾದ ದಾಸೋಹ ಕೂಡ ನಡೆಯಲಿದೆ. ಸಂಜೆ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ರಾಜು ಗೌಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ನಿರ್ದೇಶಕರಾದ ಸುರೇಶ ಪೂಜಾರ, ಗಣೇಶ ಮೂಡ್ಲಿಯವರ, ಭೋಜರಾಜ ಕರೂದಿ, ನಾಗೇಂದ್ರ ಬಂಕಾಪೂರ, ಯಲ್ಲಪ್ಪ ಶೇರಖಾನೆ, ಗುರುರಾಜ ನಿಂಗೋಜಿ, ವಿರೂಪಾಕ್ಷಪ್ಪ ಕಡಬಗೇರಿ, ಬಾಳಾರಾಮ ಗುರ್ಲಹೊಸುರು, ರವಿಚಂದ್ರ ಪುರೋಹಿತ, ನಾರಾಯಣ ಅಥಣಿ, ಸಂಜಯ ಬೇದ್ರೆ, ಕೃಷ್ಣಾ ಬಾಗಲೆ, ಈಶ್ವರ ವಾಲ್ಮೀಕಿ, ಕೀರ್ತಿಕುಮಾರ ಚಿನ್ನಮುಳಗುಂದ ಇದ್ದರು. ಇದೇ ಸಂದರ್ಭದಲ್ಲಿ ಗ್ರಾಮದೇವಿ ದೇವಸ್ಥಾನದ ಲಾಂಛನ ಬಿಡುಗಡೆಗೊಳಿಸಲಾಯಿತು.