ಸಾರಾಂಶ
ಮುಂಗಾರು ಮಳೆಯ ಅಬ್ಬರದ ನಡುವೆಯೇ ರಾಜ್ಯಾದ್ಯಂತ ಡೆಂಘೀ ಜ್ವರದ ಬಾಧೆಯೂ ಹೆಚ್ಚುತ್ತಿದ್ದು, ಪ್ರತಿದಿನ ನೂರಾರು ಮಂದಿ ಜ್ವರ ಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ
ಬೆಂಗಳೂರು : ಮುಂಗಾರು ಮಳೆಯ ಅಬ್ಬರದ ನಡುವೆಯೇ ರಾಜ್ಯಾದ್ಯಂತ ಡೆಂಘೀ ಜ್ವರದ ಬಾಧೆಯೂ ಹೆಚ್ಚುತ್ತಿದ್ದು, ಪ್ರತಿದಿನ ನೂರಾರು ಮಂದಿ ಜ್ವರ ಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಮಧ್ಯೆ ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಸೇರಿ ರಾಜ್ಯದಲ್ಲಿ ಮತ್ತೆ ನಾಲ್ವರು ಭಾನುವಾರ ಮೃತಪಟ್ಟಿದ್ದು, ಡೆಂಘೀಯಿಂದಾಗಿಯೇ ಇವರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಲಲಿತಾ (32), ಹಾಸನ ತಾಂಡ್ಯದ ಸುಪ್ರೀತಾ(27), ಗದಗ ತಾಲೂಕಿನ ಶಿರುಂಜ ಗ್ರಾಮದ ಚಿರಾಯಿ ಹೊಸಮನಿ (5), ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿಯ ದೀಕ್ಷಾ ರಾಮಪ್ಪ ಬನ್ನಿಹಟ್ಟಿ(9) ಮೃತರು. ಜ್ವರದಿಂದ ಬಳಲುತ್ತಿದ್ದ ಇವರಿಗೆ ಡೆಂಘೀ ದೃಢಪಟ್ಟಿತ್ತು. ಆದರೆ ಆರೋಗ್ಯ ಇಲಾಖೆ ಇವರ ಸಾವಿಗೆ ಡೆಂಘೀಯೇ ಕಾರಣ ಎಂದು ಇನ್ನೂ ಖಚಿತಪಡಿಸಿಲ್ಲ.
ಲಿಲಿತಾ ಅವರಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ ಡೆಂಘೀ ದೃಢಪಟ್ಟಿತ್ತು. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು, ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಗದಗದ ಚಿರಾಯು ಎಂಬ ಬಾಲಕ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಳೆದೆರಡು ವಾರಗಳಿಂದ ಜ್ವರದಿಂದ ಬಳಲುತ್ತಿದ್ದ ಹಾವೇರಿ ಜಿಲ್ಲೆ ಬ್ಯಾಡಗಿಯ ಬಾಲಕಿ ದೀಕ್ಷಾ ರಾಮಪ್ಪ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಇದೇ ವೇಳೆ, ಒಂದು ವಾರದಿಂದ ಡೆಂಘೀಯಿಂದ ಬಳಲುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆಯ ಸುಪ್ರೀತಾ ಎಂಬುವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.