ಸಾರಾಂಶ
ಶಿರಹಟ್ಟಿ: ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ಹಾಗೂ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಶಾಸಕರ ಬಹುದಿನಗಳ ಪ್ರಯತ್ನದ ಫಲವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಶಿರಹಟ್ಟಿ ಘಟಕಕ್ಕೆ ೪ ಬಸ್ ನೀಡಿದ್ದು ಶಾಸಕ ಡಾ. ಚಂದ್ರು ಲಮಾಣಿ ಶುಕ್ರವಾರ ಸಂಚಾರಕ್ಕೆ ಚಾಲನೆ ನೀಡಿದರು.
ನಂತರ ಶಾಸಕ ಡಾ. ಚಂದ್ರು ಕೆ. ಲಮಾಣಿ ಹೊಸ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ಬಸ್‌ನ ಒಳಗಡೆ ಸೀಟುಗಳ ಅಂತರ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೂತನ ಬಸ್‌ಗಳನ್ನು ಶಿರಹಟ್ಟಿ ಘಟಕಕ್ಕೆ ತರುವ ಪ್ರಯತ್ನ ಮುಂದುವರೆಯಲಿದೆ. ಹೊಸದಾಗಿ ಸೇರ್ಪಡೆ ಹೊಂದಿರು ಬಸ್‌ಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಹೊಸದಾಗಿ ಸೇರ್ಪಡೆ ಹೊಂದಿರುವ ನೂತನ ಬಸ್‌ಗಳನ್ನು ಸ್ಥಳೀಯರಿಗೆ ಅನುಕೂಲವಾಗುವ ದಿಸೆಯಲ್ಲಿ ರಾಣೆಬೆನ್ನೂರ, ಬೆಳ್ಳಟ್ಟಿ ಮಾರ್ಗವಾಗಿ ಶ್ರೀಕ್ಷೇತ್ರ ಸಿಂಗಟಾಲೂರ ಸೇರಿದಂತೆ ರಾತ್ರಿ ಸಮಯದಲ್ಲಿ ಗದಗ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುವ ಕುರಿತು ಗಮನಕ್ಕೆ ಬಂದಿದ್ದು, ಈ ಎಲ್ಲ ಮಾರ್ಗವಾಗಿ ಬಸ್ ಸಂಚರಿಸಲು ಸಹಕರಿಸಲು ಕೋರಿದರು.ಮನವಿ ಸಲ್ಲಿಕೆ: ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ಸಂಘಟನೆಯವರು ಪಟ್ಟಣದ ಸ್ಮಶಾನದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಡಿಪೋದ ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಹಾಗೂ ಬೀದಿ ದೀಪ ಅಳವಡಿಸುವ ಕುರಿತು ಶಾಸಕರಿಗೆ ಇದೇ ವೇಳೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಸಂಪೂರ್ಣ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ. ಸರ್ಕಾರ ಅಭಿವೃದ್ಧಿಗಾಗಿ ನಯಾಪೈಸೆ ಅನುದಾನ ನೀಡುತ್ತಿಲ್ಲ. ನನ್ನದು ಮೀಸಲು ಮತಕ್ಷೇತ್ರ ಇದ್ದರೂ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸುತ್ತಿಲ್ಲ. ಶಿರಹಟ್ಟಿ ಮತಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿದೆ.ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷ ಅಕ್ಬರಸಾಬ ಯಾದಗಿರಿ, ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಬಸವರಾಜ ಪಲ್ಲೇದ, ಅಶೋಕ ವರವಿ, ಬಸವರಾಜ ತುಳಿ, ಶ್ರೀನಿವಾಸ ಬಾರಬರ, ರಾಮಣ್ಣ ಕಂಬಳಿ, ಪರಶುರಾಮ ಡೊಂಕಬಳ್ಳಿ, ಬಸವರಾಹ ವಡವಿ, ಮುನ್ನಾ ಢಾಲಾಯತ, ರಫೀಜ ಕೆರಿಮನಿ, ಶ್ರೀನಿವಾಸ ಕಪಟಕರ, ಜಾಕೀರ ಕೋಳಿವಾಡ,ಇಂತಿಯಾಜ ಶಿಗ್ಲಿ, ಸಂಜೀವರೆಡ್ಡಿ ಹಸರೆಡ್ಡಿ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿ, ಚಾಲಕರು, ನಿರ್ವಾಹಕರು ಇದ್ದರು.