180 ರು. ಟೋಲ್‌ ಶುಲ್ಕ ಉಳಿಸಲು ಹೋಗಿ ಮಸಣ ಸೇರಿದ ನಾಲ್ವರು

| Published : Apr 04 2025, 12:45 AM IST

ಸಾರಾಂಶ

ಕಾರೊಂದಕ್ಕೆ ಹಿಂದಿನಿಂದ ವೇಗವಾಗಿ ಬಂದ ಐರಾವತ ಬಸ್ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ತೂಬಿನಕೆರೆ ಬಳಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ. ಮಂಡ್ಯಕಾರೊಂದಕ್ಕೆ ಹಿಂದಿನಿಂದ ವೇಗವಾಗಿ ಬಂದ ಐರಾವತ ಬಸ್ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ತೂಬಿನಕೆರೆ ಬಳಿ ಗುರುವಾರ ನಡೆದಿದೆ.ಬೆಂಗಳೂರಿನ ಜೆ.ಪಿ.ನಗರ ನಿವಾಸಿಗಳಾದ ಸತ್ಯಾನಂದರಾಜೇ ಅರಸ್, ಪತ್ನಿ ನಿಶ್ಚಿತಾ, ಸಹೋದರ ಚಂದ್ರರಾಜೇ ಅರಸ್, ಪತ್ನಿ ಸುವೇದಿನಿ ರಾಣಿ ಅಪಘಾತದಲ್ಲಿ ಮೃತಪಟ್ಟವರು.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮದಲ್ಲಿ ನೆಲೆಸಿದ್ದ ಸತ್ಯಾನಂದರಾಜೇ ಅರಸ್‌ ಅವರ ಸೋದರಮಾವ ಎನ್‌.ರಾಜೇ ಅರಸ್‌ ಮೃತಪಟ್ಟಿದ್ದರಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಾಲ್ವರು ಬೆಂಗಳೂರಿನಿಂದ ತೆರಳುತ್ತಿದ್ದರು. ಕಾರು ಚಾಲನೆ ಮಾಡುತ್ತಿದ್ದ ಚಂದ್ರರಾಜೇ ಅರಸ್ ಅವರು ತೂಬಿನಕೆರೆ ಬಳಿಯ ಎಕ್ಸಿಟ್ ಪಾಯಿಂಟ್‌ಗೆ ಬಂದ ಸಮಯದಲ್ಲಿ ಟೋಲ್‌ ಶುಲ್ಕ ಕಟ್ಟುವುದನ್ನು ತಪ್ಪಿಸುವ ವೇಳೆ ಗೊಂದಲಕ್ಕೊಳಗಾಗಿ ಕಾರನ್ನು ನಿಧಾನ ಮಾಡಿದಾಗ ಹಿಂದಿನಿಂದ ವೇಗವಾಗಿ ಬಂದ ಐರಾವತ ಬಸ್ ಕಾರಿಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನೊಳಗಿದ್ದ ನಾಲ್ವರೂ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.