ಆನಗೋಡು ಗ್ರಾಮದ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ 3 ದಿನಗಳಲ್ಲಿ ಒಟ್ಟು ಚುಕ್ಕೆ ಜಿಂಕೆಗಳು ಸಾವನ್ನಪ್ಪಿದ್ದು, ಮುನ್ನೆಚ್ಚರಿಕೆಯಾಗಿ ಮುಂದಿನ ಆದೇಶದವರೆಗೂ ಮೃಗಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.

- ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ಬಂದ್‌ । ಜಿಂಕೆಗಳಿಗೆ ಹೆಮರಾಜಿಕ್ ಸೆಪ್ಟಿಸೆಮಿಯಾ ರೋಗ ಶಂಕೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆನಗೋಡು ಗ್ರಾಮದ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ 3 ದಿನಗಳಲ್ಲಿ ಒಟ್ಟು ಚುಕ್ಕೆ ಜಿಂಕೆಗಳು ಸಾವನ್ನಪ್ಪಿದ್ದು, ಮುನ್ನೆಚ್ಚರಿಕೆಯಾಗಿ ಮುಂದಿನ ಆದೇಶದವರೆಗೂ ಮೃಗಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.

ತಾಲೂಕಿನ ಆನಗೋಡು ಗ್ರಾಮದ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಜ,16ರಂದು ಮೊದಲ ಚುಕ್ಕೆಜಿಂಕೆ ಸಾವು ದಾಖಲಾಗಿತ್ತು. ತಕ್ಷಣವೇ ವಿಭಾಗೀಯ ಅಧಿಕಾರಿಗಳು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎನ್‌ಒಪಿ)ಗಳನ್ನು ಜಾರಿಗೆ ತಂದರು. ಜ.17ರಂದು ಮತ್ತೆ 2 ಚುಕ್ಕೆಜಿಂಕೆಗಳ ಸಾವು ಸಂಭವಿಸಿದ ಹಿನ್ನೆಲೆ ತಕ್ಷಣವೇ ಪ್ರಾಣಿ ಆರೋಗ್ಯ ಸಲಹಾ ಸಮಿತಿ ಸದಸ್ಯರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಇಲಾಖೆಯಿಂದ ಕೋರಲಾಯಿತು ಎಂದು ಹೇಳಿದ್ದಾರೆ.

ಮತ್ತೆ ಜ.18ರಂದು ಭಾನುವಾರ ಇನ್ನೊಂದು ಜಿಂಕೆ ಮೃತಪಟ್ಟಿದೆ. ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಮೃತ ಜಿಂಕೆಗಳ ಸಾವಿಗೆ ನಿಖರ ಕಾರಣ ತಿಳಿಯಲು ಅವುಗಳ ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಲ್ಯಾಬ್‌ಗೆ ಕಳಿಸಿದ್ದಾರೆ. ಈ ಹಿನ್ನೆಲೆ ಆನಗೋಡು ಕಿರು ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ಬಂದ್ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

​ಶಂಕಿತ ಕಾರಣ ಮತ್ತು ಕೈಗೊಂಡ ಕ್ರಮ:

ಜಿಂಕೆಗಳ ಸರಣಿ ಸಾವಿನ ಪ್ರಾಥಮಿಕ ಲಕ್ಷಣಗಳ ಪರಿಶೀಲನೆ ನಂತರ ಇದು ''''''''ಹೆಮರಾಜಿಕ್ ಸೆಪ್ಟಿಸೆಮಿಯಾ'''''''' (HS) ಎಂಬ ಸಾಂಕ್ರಾಮಿಕ ರೋಗವಿರಬಹುದು ಎಂದು ಸಮಿತಿಯು ಶಂಕಿಸಿದೆ. ರೋಗ ಹರಡುವುದನ್ನು ತಡೆಯಲು ​ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

​ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ​ಮೃಗಾಲಯದಾದ್ಯಂತ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ​ಮೃಗಾಲಯದಲ್ಲಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಅವುಗಳಲ್ಲಿ 94 ಹೆಣ್ಣುಜಿಂಕೆ, 58 ಗಂಡುಜಿಂಕೆ ಹಾಗೂ 18 ಮರಿ ಜಿಂಕೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಕಿರು ಮೃಗಾಲಯದಲ್ಲಿ ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ ಎಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.

- - -

(ಸಾಂದರ್ಭಿಕ ಚಿತ್ರ)