ತುಮಕೂರು-ಬೆಂಗಳೂರು ನಡುವೆ ೪ ರೈಲು ಮಾರ್ಗ

| Published : Aug 18 2025, 12:00 AM IST

ಸಾರಾಂಶ

ಬೆಳೆಯುತ್ತಿರುವ ತುಮಕೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶ, ರೈಲು ಪ್ರಮಾಣ ಅವಲಂಬನೆ ಹೆಚ್ಚಾಗುವ ಭವಿಷ್ಯದ ದೃಷ್ಟಿಯಿಂದ ತುಮಕೂರು-ಬೆಂಗಳೂರು ನಡುವೆ ನಾಲ್ಕು ರೈಲು ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಹೆಚ್ಚುವರಿ ರೈಲುಗಳ ಸೇವೆ ಒದಗಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಬೆಳೆಯುತ್ತಿರುವ ತುಮಕೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶ, ರೈಲು ಪ್ರಮಾಣ ಅವಲಂಬನೆ ಹೆಚ್ಚಾಗುವ ಭವಿಷ್ಯದ ದೃಷ್ಟಿಯಿಂದ ತುಮಕೂರು-ಬೆಂಗಳೂರು ನಡುವೆ ನಾಲ್ಕು ರೈಲು ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಹೆಚ್ಚುವರಿ ರೈಲುಗಳ ಸೇವೆ ಒದಗಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೇದಿಕೆಯ 11ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಪ್ರಯಾಣಿಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿದರು. ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ನಗರದ ಹೊರವಲಯದ ತಿಮ್ಮರಾಜನಹಳ್ಳಿ ಬಳಿ ರೈಲ್ವೆ ಇಲಾಖೆಯಿಂದ ಬೃಹತ್ ಗೋಡೌನ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ ಸುಮಾರು 200 ಎಕರೆ ಜಾಗದ ಅವಶ್ಯಕತೆಯಿದ್ದು, ಈ ಬಗ್ಗೆ ಕೆಎಐಡಿಬಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡಿರುವುದಾಗಿ ಹೇಳಿದರು.

ನಾನು ಕೆಲಸಗಾರ. ಯಾರನ್ನೋ ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ, ಜನರಿಗೆ ಅನುಕೂಲ ಕಲ್ಪಿಸಲು ಕೆಲಸ ಮಾಡುತ್ತಿದ್ದೇನೆ. 50 ವರ್ಷಗಳಿಂದ ನೆನೆಗುದಿಗೆ ಬಿದ್ದಿದ ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಿಸಲು ಸೋಮಣ್ಣನೇ ಬರಬೇಕಾಯಿತು. ಜಿಲ್ಲೆಯಲ್ಲಿ 27-28 ರೈಲ್ವೆಗೇಟ್‌ಗಳನ್ನು ತೆರವುಗೊಳಿಸಿ ಅಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಕೆಲಸ ಆರಂಭವಾಗಿದ್ದು ಎರಡು ವರ್ಷಗಳಲ್ಲಿ ಲೋಕಾರ್ಪಣೆಯಾಗಲಿವೆ. 18 ವರ್ಷಗಳಿಂದ ಬಾಕಿ ಉಳಿದಿದ್ದ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ವೇಗ ಸಿಕ್ಕಿದೆ. ಸುಮಾರು ಎರಡೂವರೆ ಸಾವಿರ ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದೆ ಎಂದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ತುಮಕೂರನ್ನು ಜಗತಿಗೆ ಪರಿಚಯಿಸಿದ ಮಹಾತಪಸ್ವಿ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ಈ ನಿಲ್ದಾಣಕ್ಕೆ ಇಡಲಾಗುತ್ತದೆ. ಈಗ ತುಮಕೂರು ನಿಲ್ದಾಣದಲ್ಲಿ ಎರಡು ವಂದೇ ಭಾರತ್ ರೈಲುಗಳ ನಿಲುಗಡೆ ಮಾಡಲಾಗಿದೆ. ಇನ್ನುಮುಂದೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.

ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಅವರು, ತುಮಕೂರು-ಬೆಂಗಳೂರು ಮಾರ್ಗದಲ್ಲಿ ಹೆಚ್ಚಿನ ರೈಲು ಸೇವೆ ಒದಗಿಸಬೇಕು. ತುಮಕೂರಿನಿಂದ ಹೊರಡುವ ಮೆಮೊ ರೈಲು ಯಶವಂತಪುರದವರೆಗೆ ಇದೆ. ಅದನ್ನು ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗೂ ವಿಸ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ತುಮಕೂರಿನಿಂದ ಹೋಗಿಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ರೈಲು ಸೇವೆ ಒದಗಿಸಬೇಕು ಎಂದು ಸಚಿವರನ್ನು ಕೋರಿದರು.

ಈ ವೇಳೆ ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಬಿಜೆಪಿ ಮುಖಂಡ ಎಸ್.ಶಿವಪ್ರಸಾದ್, ವೇದಿಕೆಯ ಕಾರ್ಯದರ್ಶಿ ನಾಗರಾಜು, ಖಜಾಂಚಿ ಆರ್.ಬಾಲಾಜಿ ಮೊದಲಾದವರು ಭಾಗವಹಿಸಿದ್ದರು.

ಈ ವೇಳೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಸಿದ್ಧಗಂಗಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಸ್.ಪರಮೇಶ್ ಉದ್ಘಾಟಿಸಿದರು. 183 ಜನ ಆರೋಗ್ಯ ಶಿಬಿರದ ಪ್ರಯೋಜನ ಪಡೆದರು. ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದ ನೇತ್ರ ತಪಾಸಣಾ ಶಿಬಿರದಲ್ಲಿ 85 ಜನ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಕಾರದ ಕಾರ್ಯಕ್ರಮದಲ್ಲಿ 9 ಮಂದಿ ರಕ್ತದಾನ ಮಾಡಿದರು.