ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ ವೈದ್ಯಕೀಯ ರಜೆ ಮೇಲಿದ್ದ ಅವಧಿಯಲ್ಲಿನ ವೇತನ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಗದಗ: ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ ವೈದ್ಯಕೀಯ ರಜೆ ಮೇಲಿದ್ದ ಅವಧಿಯಲ್ಲಿನ ವೇತನ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಆರೋಪಿಗಳಾದ ಶಿರಹಟ್ಟಿ ತಾಲೂಕಿನ ಯಳವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕ ಮಲ್ಲಿಕಾರ್ಜುನ ಫಕ್ಕೀರಪ್ಪ ಕಲ್ಲಬಂಡಿ ಹಾಗೂ ಕಿರಿಯ ಪುರುಷ ಆರೋಗ್ಯ ಸಹಾಯಕ ವೀರಪ್ಪ ಮಲ್ಲಪ್ಪ ಕುರಿ ಶಿಕ್ಷೆಗೆ ಒಳಗಾದ ಅಪರಾಧಿಗಳು.ಪ್ರಕರಣದ ವಿವರ: ಯಳವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಾಂದಬೀಬಿ ಎಂಬುವವರು 2010ರ ಮಾ.1ರಿಂದ ಜು.24ರ ವರೆಗೆ ವೈದ್ಯಕೀಯ ರಜೆ ಪಡೆದಿದ್ದರು. ವೈದ್ಯಕೀಯ ರಜೆ ಅವಧಿಯಲ್ಲಿನ ವೇತನವನ್ನು ಪಾವತಿಸಲು ಹಾಗೂ ಸೇವಾ ಪುಸ್ತಕ ಮತ್ತು ಎಲ್‌ಪಿಸಿಯನ್ನು ವರ್ಗಾವಣೆಯಾದ ಸ್ಥಳಕ್ಕೆ ಕಳುಹಿಸಲು ಆರೋಪಿಗಳಾದ ಮಲ್ಲಿಕಾರ್ಜುನ ಫಕ್ಕೀರಪ್ಪ ಕಲ್ಲಬಂಡಿ ಹಾಗೂ ವೀರಪ್ಪ ಮಲ್ಲಪ್ಪ ಕುರಿ ಸತಾಯಿಸಿದ್ದಾರೆ.
ಅಲ್ಲದೇ, ಚಾಂದಬೀಬಿ ಅವರ ಗೈರು ಹಾಜರಿಯ ವೇತನ ₹ 63,003 ಮಲ್ಲಿಕಾರ್ಜುನ ಫಕ್ಕೀರಪ್ಪ ಕಲ್ಲಬಂಡಿ ಡ್ರಾ ಮಾಡಿಕೊಂಡು, ಅದರಲ್ಲಿ ತಮ್ಮ ಖರ್ಚು ಎಂದು ₹ 13,500 ತೆಗೆದುಕೊಂಡು ಉಳಿದ ಹಣವನ್ನು ಪೇ ಬಿಲ್‌ನ್ನು ಕಿರಿಯ ಪುರುಷ ಆರೋಗ್ಯ ಸಹಾಯಕ ವೀರಪ್ಪ ಮಲ್ಲಪ್ಪ ಕುರಿಗೆ ನೀಡಿದ್ದಾನೆ. ಆ ಹಣದಲ್ಲಿ ವೀರಪ್ಪ ತನ್ನ ಖರ್ಚು ಎಂದು 21,000 ರು. ಕಡಿತ ಮಾಡಿಕೊಂಡು ಉಳಿದ ಹಣವನ್ನು ಕೊಡುತ್ತೇನೆ. ಪೇ ಬಿಲ್‌ಗೆ ಸಹಿ ಮಾಡಿ ಎಂದು ತಿಳಿಸಿದ್ದಾನೆ. ಈ ವೇಳೆ ಚಾಂದಬೀಬಿ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು ವಾದ-ಪ್ರತಿವಾದಗಳನ್ನು ಆಲಿಸಿ ಇಬ್ಬರು ಆರೋಪಿಗಳಿಗೆ ಕಲಂ 7 ಸಹ ಕಲಂ 13(2) ಲಂಚ ಪ್ರತಿಬಂಧ ಕಾಯ್ದೆ 1988ರ ಅನ್ವಯ 4 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ. ವಿಶೇಷ ಸರಕಾರಿ ಅಭಿಯೋಜಕರಾಗಿ ಎಂ.ಎಂ. ಶಿಗ್ಲಿ ಅವರು ವಾದ ಮಂಡಿಸಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಗದಗ ಜಿಲ್ಲಾ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.