ಸಾರಾಂಶ
ಶಿರಸಿ:ರಾಜ್ಯದ ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಮಾ. 19ರಿಂದ 27ರ ವರೆಗೆ ನಡೆಯಲಿದ್ದು, ಈ ಬಾರಿ 30ರಿಂದ 40 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜಾತ್ರೆ ಚಪ್ಪರದಲ್ಲಿ ಸಕಲ ವ್ಯವಸ್ಥೆಯನ್ನೂ ಶಿಸ್ತುಬದ್ಧವಾಗಿ ಮಾಡಲಾಗುತ್ತದೆ ಎಂದು ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್.ಜಿ. ನಾಯ್ಕ ಹೇಳಿದರು.ಅವರು ಮಂಗಳವಾರ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.೨೦೨೪ನೇ ಸಾಲಿನ ದೇವಿಯ ಜಾತ್ರೆ ಮಹೋತ್ಸವದ ಅಂಗವಾಗಿ ಭಕ್ತರಿಗೆ ವಿತರಿಸಲು ೪ ಲಕ್ಷಕ್ಕಿಂತ ಅಧಿಕ ಲಡ್ಡು ತಯಾರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ೨ ಲಕ್ಷ ಜನರಿಗೆ ಅನ್ನಪ್ರಸಾದ ವಿತರಿಸಲು ಸಿದ್ಧಪಡಿಸಿಕೊಳ್ಳಲಾಗುವುದು. ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡುವ ಭಕ್ತರಿಗೆ ನೆರಳಿಗೆ ಶಾಮಿನ್ನ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಾತ್ರಾ ಸಮಯದಲ್ಲಿ ಕುಡಿಯುವ ನೀರು ಮತ್ತು ಪಾನಕ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಯಾತ್ರಿ ನಿವಾಸದ ಕಟ್ಟಡವನ್ನು ಭಕ್ತರ ವ್ಯವಸ್ಥೆಗೆ ನೀಡುವ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದ ಅವರು, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿಯಲ್ಲಿ ಪೋಸ್ಟರ್ ಅಂಟಿಸುವ ಕಾರ್ಯ ಮಾಡಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ. ದೇವಿಯ ದರ್ಶನ ಮತ್ತು ಸೇವೆ ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಸೇವಾ ವಿವರ ಹೆಚ್ಚಳ ಮಾಡದೇ, ಹಳೆಯ ದರ ಮುಂದುವರಿಸಲಾಗುತ್ತಿದೆ. ವಯೋವೃದ್ಧರು, ಗರ್ಭಿಣಿಯರು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಮಾರಿಪಟ್ಟಿಯನ್ನು ಪ್ರತಿ ಮನೆಗೆ ನೀಡಲಾಗುತ್ತಿದೆ. ಜಾತ್ರಾ ಜಪ್ಪರವನ್ನು ಸುವ್ಯವಸ್ಥಿತವಾಗಿ ಮತ್ತು ಭದ್ರತೆಯಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ದೇವಾಲಯಗಳಿಗೆ, ಮೊಕ್ತೇಸರರಿಗೆ, ವಿವಿಧ ಮಠಾಧೀಶರಿಗೆ, ರಾಜ್ಯದ ಪ್ರಮುಖ ದೇವಾಲಯ, ಗಣ್ಯ ವಕ್ತಿ, ಜನಪ್ರತಿನಿಧಿಗಳನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ. ಕಳೆದ ಜಾತ್ರೆಯ ನೂನ್ಯತೆ ಸರಿಪಡಿಸುವ ಸಂಬಂಧ ಸಭೆ ನಡೆಸಿದ್ದೇವೆ. ಕಲ್ಯಾಣೋತ್ಸವ ಸಂದರ್ಭದಲ್ಲಿ ನೂಕುನುಗ್ಗಲಾಗದಂತೆ ಅವಶ್ಯವಿರುವರಿಗೆ ಮಾತ್ರ ವೇದಿಕೆಯ ಬಳಿಯಲ್ಲಿ ಅವಕಾಶ ನೀಡುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ, ಬಸವರಾಜ ಚಕ್ರಸಾಲಿ, ವ್ಯವಸ್ಥಾಪಕ ಚಂದ್ರಕಾಂತ ನಾಯ್ಕ ಇದ್ದರು.