ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ೪೦ ಗ್ರಾಮ ಪಂಚಾಯ್ತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯ್ತಿಗಳಾಗಿ ಗುರುತಿಸಲಾಗಿದೆ. ಎಲ್ಲಾ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕ್ಷಯ ರೋಗವನ್ನು ಗುಣಪಡಿಸಲು ಸಾಧ್ಯ. ರೋಗದ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಕ್ಷಯರೋಗ ದಿನದ ಅಂಗವಾಗಿ ‘೧೦೦ ದಿನಗಳ ಟಿ.ಬಿ ಮುಕ್ತ ಭಾರತ ಅಭಿಯಾನ ಜಾಥಾ’ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕ್ಷಯರೋಗ ತಡೆಗಟ್ಟುವುದು ಬಹಳ ಮುಖ್ಯ. ಸಾರ್ವಜನಿಕರಿಗೆ ಜಾಗೃತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಸೋಂಕಿತರು ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದರೆ ರೋಗವನ್ನು ಗುಣಪಡಿಸಬಹುದು. ಕ್ಷಯ ರೋಗಿಗಳನ್ನು ಪ್ರೀತಿ ವಿಶ್ವಾಸ ಹಾಗೂ ವಾತ್ಸಲ್ಯದಿಂದ ನೋಡಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಕ್ಷಯರೋಗ ಅಭಿಯಾನಕ್ಕೆ ಮೂರು ಉದ್ದೇಶಗಳಿದ್ದು, ಎಲ್ಲಾ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚುವುದು, ಕ್ಷಯರೋಗಿಗಳ ಮರಣ ಪ್ರಮಾಣ ಕಡಿಮೆಗೊಳಿಸುವುದು ಹಾಗೂ ತಡೆಗಟ್ಟುವುದು. ಹೊಸ ಕ್ಷಯರೋಗ ಪ್ರಕರಣಗಳನ್ನು ತಡೆಯುವುದು ಎಂದರು.
ಕ್ಷಯ ರೋಗಿಗಳು ನಿಗದಿತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಒಂದೊಂದೇ ಗ್ರಾಮ ಪಂಚಾಯ್ತಿಯನ್ನು ಕ್ಷಯರೋಗ ಮುಕ್ತ ಗ್ರಾಮ ಪಂಚಾಯ್ತಿಯನ್ನಾಗಿ ಮಾಡುವುದೇ ನಮ್ಮ ಧ್ಯೇಯ ಎಂದರು.
ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ಕಳೆದ ಮೂರು ವರ್ಷದಿಂದ ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯ್ತಿಯಾಗಿದ್ದು, ಸಾಧನೆಯತ್ತ ಸಾಗಿ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ, ಜಿಲ್ಲಾ ಕಾರ್ಯಕ್ರಮ ಅಭಿವೃದ್ಧಿ ಅಧಿಕಾರಿ ಡಾ.ಕಾಂತರಾಜು, ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಜವರೇಗೌಡ, ಐಎಂಎ ಅಧ್ಯಕ್ಷ ಡಾ.ಮರೀಗೌಡ ಇತರರಿದ್ದರು.