ಲೋಕಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಅಟಾಟೋಪಕ್ಕೆ ಜನ ಹೈರಾಣಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಅಟಾಟೋಪಕ್ಕೆ ಜನ ಹೈರಾಣಾಗಿದ್ದಾರೆ.ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ ಬೀದಿನಾಯಿಗಳ ಕಡಿತದ ೪೧೨ ಪ್ರಕರಣಗಳು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಣಿಯಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಹೀಗಿದ್ದರೂ ಲೋಕಾಪುರ ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಿಸಿದ ಇಲಾಖೆ ಕ್ರಮಕ್ಕೆ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ, ಮೇನ್ ಬಜಾರ್, ಶಿವಾಜಿ ವೃತ್ತ, ಕಾಯಿಪಲ್ಲೆ ಮಾರ್ಕೆಟ್‌ಗಳಲ್ಲಿ ಜನರು ಭಯದಲ್ಲಿಯೇ ಸಂಚರಿಸುವಂತಾಗಿದೆ. ಈ ಒಂದೇ ಮಾರ್ಗದಲ್ಲಿ ೫೦ಕ್ಕೂ ಅಧಿಕ ಬೀದಿ ನಾಯಿಗಳು ಬೀಡುಬಿಟ್ಟಿವೆ. ಇದೇ ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಗಳು, ಶಾಲೆಗಳು, ಬ್ಯಾಂಕಗಳು ಬರುತ್ತವೆ. ಇದು ಪ್ರಮುಖ ರಸ್ತೆ ಮಾರ್ಗವಾಗಿದ್ದರಿಂದ ಜನದಟ್ಟಣೆ ಇದ್ದೇ ಇರುತ್ತದೆ. ಶಾಲಾ ಮಕ್ಕಳಂತೂ ಒಂಟಿಯಾಗಿ ಚಲಿಸುವುದು ಅಪಾಯಕಾರಿಯಾಗಿದೆ. ಬೈಕ್, ಸೈಕಲ್‌ಗಳಲ್ಲಿ ಸಂಚರಿಸುವವರನ್ನು ಬೆನ್ನತ್ತಿ ಕಚ್ಚುವ ನಾಯಿಗಳು ಇವೆ. ಮೈಯಲ್ಲಾ ಕಣ್ಣಾಗಿ ಎಚ್ಚರದಿಂದ ಸಾಗಬೇಕಾದ ಪರಿಸ್ಥಿತಿ ಇದೆ.ಪಟ್ಟಣದ ಕೆಲವು ವಾರ್ಡಗಳು ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳು ಸಹ ಇದಕ್ಕೆ ಹೊರತಾಗಿಲ್ಲ. ಬೀದಿ ಬೀದಿಗಳಲ್ಲಿ ನಾಯಿಗಳ ಉಪಟಳ ಕಂಡುಬರುತ್ತಿದೆ. ಬೀದಿ ನಾಯಿ ಕಚ್ಚುವ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೆಲ ನಾಯಿಗಳ ಅನಾರೋಗ್ಯಕ್ಕೀಡಾಗಿದ್ದು,ಅವುಗಳ ಕಡಿತದಿಂದ ರೇಬೀಸ್‌ನಂತಹ ಅಪಾಯಕಾರಿ ರೋಗಕ್ಕೆ ತುತ್ತಾಗಿ ಅಪಾಯ ಜನರನ್ನು ಕಾಡುತ್ತಿದೆ.
ಪ್ರಮುಖ ರಸ್ತೆಗಳಲ್ಲಿ ಸಾಗುವ ವಾಹನಗಳಿಗೆ ನಾಯಿಗಳು ಅಡ್ಡ ಬರುತ್ತಿದ್ದು, ಸವಾರರು ದಿಢೀರ್ ಬ್ರೇಕ್ ಹಾಕುತ್ತಾರೆ. ಇದರಿಂದ ಕೆಲ ಸವಾರರು ಬಿದ್ದು ಏಟು ಮಾಡಿಕೊಂಡ ಉದಾಹರಣೆಯೂ ಇದೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ.ಕಚ್ಚಿದರೆ ನಿರ್ಲಕ್ಷ್ಯ ಬೇಡ : ನಾಯಿ ಕಡಿತಕ್ಕೊಳಗಾದವರು ನಿರ್ಲಕ್ಷ್ಯ ವಹಿಸದೆ ತಕ್ಷಣ ರೇಬೀಸ್ ಚುಚ್ಚುಮದ್ದು ಪಡೆಯಬೇಕು. ರೇಬೀಸ್ ಇರುವ ನಾಯಿ ಕಚ್ಚಿದರೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಸಾವು ಖಚಿತ. ಆರೋಗ್ಯ ಸರಿಯಿಲ್ಲದ ನಾಯಿ ಕಡಿದಾಗ ರೇಬೀಸ್ ಇಮಿನೋ ಗ್ಲೋಬಿನ್ ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಆಯುಷ್ಯ ವೈದ್ಯಾಧಿಕಾರಿ ಡಾ. ವಿನಯ ಕುಲಕರ್ಣಿ ಮಾಹಿತಿ ನೀಡಿದರು. ---
ಇದರ ಬಗ್ಗೆ ಮಾಹಿತಿ ಕೇಳಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಕನ್ನಡಪ್ರಭ ಸಂಪರ್ಕಿಸಿಲು ಯತ್ನಿಸಿದರೂ ಕರೆಗಳನ್ನು ಸ್ವೀಕರಿಸುತ್ತಿಲ್ಲ.--
ಲೋಕಾಪುರ ಪಟ್ಟಣದಲ್ಲಿ ಬೀದಿ ನಾಯಿಗಳು ಮತ್ತು ಬಿಡಾಡಿ ದನಗಳು ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.- ಈಶ್ವರ ಹವಳಖೋಡ ಕಿರಾಣಿ ವ್ಯಾಪಾರಸ್ಥರು
--ನಾಯಿ ಕಡಿತ ಪ್ರಕರಣ :
ಜೂನ್ -೫೫ಜುಲೈ-೬೦
ಆಗಸ್ಟ್ –೭೦ಸೆಪ್ಟಂಬರ್- ೮೨
ಅಕ್ಟೋಬರ್-೮೫ನವೆಂಬರ್ -೬೦