55 ಸಾವಿರ ವಿದ್ಯುತ್ ಸಂಪರ್ಕಗಳಿಗೆ 42 ಮೆಸ್ಕಾಂ ಸಿಬ್ಬಂದಿ: ಗ್ರಾಹಕರ ಅಹವಾಲು

| Published : Sep 25 2025, 01:02 AM IST

ಸಾರಾಂಶ

ಮೂಡುಬಿದಿರೆಯಲ್ಲಿ ಸುಮಾರು 55 ಸಾವಿರ ವಿದ್ಯುತ್ ಸಂಪರ್ಕಗಳಿದ್ದು ಇವುಗಳ ನಿರ್ವಹಣೆಯನ್ನು ಕೇವಲ 42 ಸಿಬ್ಬಂದಿ ಮಾಡಬೇಕಿದೆ. ಇದರಿಂದ ತಾಕೊಡೆಯಂತಹ ಗ್ರಾಮಾಂತರ ಪ್ರದೇಶಗಳಲ್ಲಿ 36 ತಾಸುಗಳಿಗೂ ಹೆಚ್ಚುಕಾಲ ವಿದ್ಯುತ್ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆಯಲ್ಲಿ ಸುಮಾರು 55 ಸಾವಿರ ವಿದ್ಯುತ್ ಸಂಪರ್ಕಗಳಿದ್ದು ಇವುಗಳ ನಿರ್ವಹಣೆಯನ್ನು ಕೇವಲ 42 ಸಿಬ್ಬಂದಿ ಮಾಡಬೇಕಿದೆ. ಇದರಿಂದ ತಾಕೊಡೆಯಂತಹ ಗ್ರಾಮಾಂತರ ಪ್ರದೇಶಗಳಲ್ಲಿ 36 ತಾಸುಗಳಿಗೂ ಹೆಚ್ಚುಕಾಲ ವಿದ್ಯುತ್ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ಮೆಸ್ಕಾಂ ಸಹಾಯವಾಣಿಯೂ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ, ವಾಟ್ಸಪ್ ಮೂಲಕ ನೀಡಿದ ದೂರುಗಳಿಗೆ ಹಲವು ಗಂಟೆಗಳಾದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಜೈಸನ್ ತಾಕೊಡೆ ಆರೋಪಿಸಿದ್ದಾರೆ.

ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ, ಕೈಗಾರಿಕಾ ವಲಯದಲ್ಲಿ ಕೈಕೊಡುವ ಕರೆಂಟ್, ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮೂಡುಬಿದಿರೆ ಕೈಗಾರಿಕಾ ವಲಯದ ಉದ್ಯಮಿಗಳ ಪರವಾಗಿ ಮಾತನಾಡಿದ ಉದ್ಯಮಿ ಬೆನ್ನಿ ಮ್ಯಾಥ್ಯೂ ವಿದ್ಯುತ್, ವ್ಯತ್ಯಯದಿಂದಾಗಿ ಕೈಗಾರಿಕೆಗಳಿಗೆ ಸಮಸ್ಯೆಯಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವೇಳೆ ಕೇಬಲ್‌ನ್ನು ಹೆದ್ದಾರಿಯ ಒಳಗಡೆ ಹೂತು ಕಾಮಗಾರಿ ಮಾಡಲಾಗಿದ್ದು ಈ ಕೇಬಲ್ ನಿರಂತರ ತೊಂದರೆ ನೀಡುತ್ತಿದ್ದು, ಮುಂದೆ ಏನಾದರೂ ಸಮಸ್ಯೆಯಾದಾಗ ಹೆದ್ದಾರಿಯನ್ನೇ ಅಗೆಯಬೇಕಾಗುತ್ತದೆ ಎಂದರು.

ಶಿರ್ತಾಡಿ ಸಬ್‌ಸ್ಟೇಶನ್ ಕಾರ್ಯಾಚರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅವರು ಆಗ್ರಹಿಸಿದ್ದು, ಶೀಘ್ರದಲ್ಲೇ ಆರಂಭಿಸುವ ಭರವಸೆ ನೀಡಲಾಯಿತು.

ಸಿಬ್ಬಂದಿ ಕೊರತೆ ಪರಿಹರಿಸುವಂತೆ ಅಧಿಕಾರಿಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಆಗ್ರಹಿಸಿದರು. ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂತೋಷ್ ಕುಮಾರ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಮೋಹನ್, ಶಾಖಾಧಿಕಾರಿ ಪ್ರವೀಣ್, ವಿವಿಧ ವಿಭಾಗಳ ಶಾಖಾಧಿಕಾರಿಗಳು ಇದ್ದರು.