ಸಾರಾಂಶ
ಎಂ. ಪ್ರಹ್ಲಾದ
ಕನಕಗಿರಿ: ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ಅಡಿ ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಐಟಿ (ಇನ್‌ಫಾರ್ಮೆಷನ್ ಟೆಕ್ನಾಲಜಿ) ಕೋರ್ಸ್ ಆಯ್ಕೆ ಮಾಡಿಕೊಂಡಿರುವ ಪಟ್ಟಣದ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ೪೨ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ!ಹೌದು, ೨೦೨೪-೨೫ನೇ ಸಾಲಿನಲ್ಲಿ ಕೆಲವು ಶಾಲೆಗಳಲ್ಲಿ ಎನ್‌ಎಸ್‌ಕ್ಯೂಎಫ್‌ನಡಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶಿಸಿತ್ತು. ಈ ಆದೇಶದನ್ವಯ ಇಲ್ಲಿನ ಆದರ್ಶ ಶಾಲೆಯಲ್ಲಿ ಆಗ ೯ನೇ ತರಗತಿಯಿದ್ದ ೪೨ ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ಬದಲಾಗಿ ಕಂಪ್ಯೂಟರ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದು, ಇದಕ್ಕೆ ಅವರ ಪೋಷಕರು ಸಮ್ಮತಿಸಿ ಒಪ್ಪಿಗೆ ಪತ್ರವನ್ನು ಸಹ ಬರೆದುಕೊಟ್ಟಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಐಟಿ ವಿಷಯಕ್ಕೆ ಪುಸ್ತಕಗಳು ಸರಬರಾಜಾಗಿರಲಿಲ್ಲ. ಶಿಕ್ಷಕರು ನೇಮಕಗೊಂಡಿರಲಿಲ್ಲ. ತಿಂಗಳಿಗೊಮ್ಮೆ ಮಾಹಿತಿಯುಳ್ಳವರೊಬ್ಬರು ಬೇಸಿಕ್ ಪಾಠ ಮಾಡಿದ್ದಾರೆ. ಆದರಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
ಆ ೪೨ ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ೧೦ನೇ ತರಗತಿಯಲ್ಲಿದ್ದು, ಶಾಲೆ ಆರಂಭಗೊಂಡು ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಐಟಿ ವಿಷಯದ ಪುಸ್ತಕ ಸರಬರಾಜಾಗಿಲ್ಲದಿರುವುದು ಒಂದೆಡೆಯಾದರೆ, ವಿಷಯ ಬೋಧಿಸಲು ಶಿಕ್ಷಕರು ನೇಮಕವಾಗಿಲ್ಲ. ಇದರಿಂದ ಪಾಲಕರಿಗೆ ನಮ್ಮ ಮಕ್ಕಳ ಭವಿಷ್ಯ ಹೇಗೆ? ಎನ್ನುವ ಚಿಂತೆ ಕಾಡತೊಡಗಿದೆ.ಐಟಿ ವಿಷಯ ಬೋಧನೆಗೆ ಬಿಇ (ಕಂಪ್ಯೂಟರ್ ಸೈನ್ಸ್) ಇಲ್ಲವೇ ಬಿಎಸ್‌ಸಿ (ಕಂಪ್ಯೂಟರ್ ಸೈನ್ಸ್) ಕಡ್ಡಾಯವಾಗಿದೆ. ಈ ವಿಷಯದಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಕಳೆದ ವರ್ಷದಿಂದಲೂ ಐಟಿಗೆ ಶಿಕ್ಷಕರೆ ಇಲ್ಲವಾಗಿದೆ. ಈ ವರ್ಷ ಇಲಾಖೆಯ ಮೇಲಧಿಕಾರಿಗಳು ಶಿಕ್ಷಕರ ನೇಮಕಾತಿಯ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟತೆಯಿಲ್ಲವಾಗಿದೆ.
ಶಿಕ್ಷಕರಿಗೆ ವೇತನವೇ ಇಲ್ಲ!: ಕಳೆದ ವರ್ಷ ಪಾಠ, ಬೋಧನೆ ಮಾಡಿದ ಅತಿಥಿ ಶಿಕ್ಷಕರಿಗೆ ವೇತನವೇ ನೀಡಿಲ್ಲ. ಇನ್ನು ಈ ವರ್ಷ ನೇಮಕ, ವೇತನದ ಬಗ್ಗೆ ಸ್ಪಷ್ಟತೆಯಿಲ್ಲವಾಗಿದ್ದರಿಂದ ಮಕ್ಕಳು ಮಾತ್ರ ಇಂದಲ್ಲ ನಾಳೆ ಶಿಕ್ಷಕರು ಬರುತ್ತಾರೆ ಎಂದು ಚಾತಕ ಪಕ್ಷಿಯಂತೆ ಕಳೆದ ಎರಡು ತಿಂಗಳಿಂದ ಕಾಯುತ್ತಾ ಕುಳಿತಿದ್ದಾರೆ. ಐಟಿ ವಿಷಯದ ತರಗತಿ ವೇಳೆಯಲ್ಲಿ ಹಿಂದಿ ಕ್ಲಾಸ್‌ಗೆ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ.ಮೊಬೈಲ್‌ನಲ್ಲೆ ಕ್ಲಾಸ್: ಐಟಿ ವಿಷಯಕ್ಕೆ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ರಾಜ್ಯವ್ಯಾಪಿ ಚರ್ಚೆ ನಡೆಯುತ್ತಿದ್ದರೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ನೋಡದೆ ಕಣ್ಮುಚ್ಚಿ ಕುಳಿತಿದ್ದು, ಮುಂದಿನ ದಾರಿ ತಿಳಿಯದೆ ಶಾಲಾ ಮಕ್ಕಳು ಯೂ-ಟ್ಯೂಬ್‌ನಲ್ಲಿ ಐಟಿ ವಿಷಯದ ಕುರಿತು ಕ್ಲಾಸ್ ಕೇಳಲಾರಂಭಿಸಿದ್ದಾರೆ. ಕೆಲವು ಮಕ್ಕಳ ಪಾಲಕರಲ್ಲಿ ಮೊಬೈಲ್ ಇಲ್ಲವಾಗಿದ್ದರಿಂದ ಅವರ ಸ್ನೇಹಿತರ ಮನೆಗಳಿಗೆ ಹೋಗಿ ಕ್ಲಾಸ್ ಕೇಳುತ್ತಿದ್ದಾರೆ.
ಎನ್‌ಎಸ್‌ಕ್ಯೂಎಫ್‌ನಡಿ ಐಟಿ ವಿಷಯ ಆಯ್ಕೆ ಮಾಡಿಕೊಂಡಿದ್ದು, ಓದಲು ಪುಸ್ತಕ ನೀಡಿಲ್ಲ. ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಮಕ್ಕಳು ಅತಂತ್ರವಾಗಿದ್ದಾರೆ. ಸಂಬಂಧಪಟ್ಟ ಇಲಾಖೆ ಮತ್ತು ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮ ಕೈಗೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಪಾಲಕ ವೆಂಕಟೇಶ ಸೌದ್ರಿ ಹೇಳಿದರು.ಎನ್‌ಎಸ್‌ಕ್ಯೂಎಫ್ ಹೊಸದಾಗಿ ಆರಂಭಗೊಂಡಿರುವ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯಾಗದಿರುವುದು, ಪುಸ್ತಕ ಹಂಚಿಕೆಯಾಗದಿರುವ ಕುರಿತು ಮೇಲಧಿಕಾರಿಗಳ ಗಮನಕ್ಕಿದೆ. ವಾರದ ಹಿಂದೆ ಆನ್‌ಲೈನ್ ಸಭೆಯಾಗಿದ್ದು, ವಿಭಾಗದ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ಎನ್‌ಎಸ್‌ಕ್ಯೂಎಫ್ ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ಹೇಳಿದರು.