ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶನಿವಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಿಸಿರುವ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
- ಹುಬ್ಬಳ್ಳಿಯಲ್ಲಿಂದು ಸರ್ಕಾರದ ಅದ್ಧೂರಿ ಸಮಾರಂಭ
- ಒಟ್ಟಿಗೇ ಇಷ್ಟು ಮನೆ ಹಸ್ತಾಂತರ ದೇಶದಲ್ಲೇ ಮೊದಲು- ಖರ್ಗೆ, ಸಿದ್ದರಾಮಯ್ಯ ಸೇರಿ ಗಣ್ಯಾತಿಗಣ್ಯರು ಭಾಗಿ
---42,345 ಮನೆ.. ಹಸ್ತಾಂತರ ಆಗಲಿರುವ ಮನೆಗಳ ಸಂಖ್ಯೆ
28 ಜಿಲ್ಲೆ.. 28 ಜಿಲ್ಲೆಗಳ ಕಡುಬಡವರಿಗೆ ಮನೆಗಳ ವಿತರಣೆ3 ಲಕ್ಷ... ಸಭೆಯಲ್ಲಿ 10 ಜಿಲ್ಲೆಗಳ 3 ಲಕ್ಷ ಜನರು ಭಾಗಿ
10 ಸಾವಿರ.. 10,000 ಬಸ್, ಇತರ ವಾಹನದಲ್ಲಿ ಸಭೆಗೆ ಜನ--
-=ಶಿವಾನಂದ ಗೊಂಬಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶನಿವಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಿಸಿರುವ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.ದೇಶದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.ಎಲ್ಲೆಲ್ಲಿ ಎಷ್ಟೆಷ್ಟು?:
2016-17ರಲ್ಲಿ ಮಂಜೂರಾಗಿರುವ 1,80,253 ಮನೆಗಳ ಪೈಕಿ ಮೊದಲ ಹಂತದಲ್ಲಿ ಕಳೆದ ವರ್ಷ 36,789 ಮನೆಗಳನ್ನು ಹಸ್ತಾಂತರಿಸಲಾಗಿತ್ತು. ಇದೀಗ 2ನೇ ಹಂತದಲ್ಲಿ 42,345 ಮನೆಗಳ ಹಸ್ತಾಂತರ ನಡೆಯಲಿದೆ. ಇನ್ನೆರಡು ತಿಂಗಳಲ್ಲಿ ಮತ್ತೆ 30 ಸಾವಿರ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿನ 1,008 ಹಾಗೂ ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಹಕ್ಕುಪತ್ರಗಳನ್ನು ಕಾರ್ಯಕ್ರಮದಲ್ಲೇ ವಿತರಿಸಲಾಗುತ್ತಿದೆ. ಇದಕ್ಕಾಗಿ 5 ಕೌಂಟರ್ ತೆರೆಯಲಾಗಿದೆ. ಬೃಹತ್ ವೇದಿಕೆ:
ಕಾರ್ಯಕ್ರಮದಲ್ಲಿ 10 ಜಿಲ್ಲೆಗಳಿಂದ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ 18 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಬಳಸಿ ಬೃಹತ್ ಪೆಂಡಾಲ್ ಅಳವಡಿಸಲಾಗಿದೆ. ಫಲಾನುಭವಿ, ಕಾರ್ಯಕರ್ತರನ್ನು ಕರೆತರಲು 2 ಸಾವಿರಕ್ಕೂ ಅಧಿಕ ಬಸ್ ಗಳನ್ನು ಬುಕ್ ಮಾಡಲಾಗಿದೆ. ಏಳೆಂಟು ಸಾವಿರ ಕಾರು, ಜೀಪ್, ಟೆಂಪೋಗಳಲ್ಲಿ ಜನರು ಆಗಮಿಸಲಿದ್ದಾರೆ. ಜನರಿಗಾಗಿ ಬರೋಬ್ಬರಿ 140 ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಪೆಂಡಾಲ್ ಹಾಕಲಾಗಿದೆ.ಬೃಹತ್ ವೇದಿಕೆ, ಎಲ್‌ಇಡಿ ಅಳವಡಿಕೆ, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಬಿಂಬಿಸುವ, ಕಾಂಗ್ರೆಸ್ ಮುಖಂಡರ ಬ್ಯಾನರ್, ಬಂಟಿಂಗ್ಸ್, ಪಕ್ಷದ ಬಾವುಟಗಳು ಎಲ್ಲೆಡೆ ರಾರಾಜಿಸುತ್ತಿವೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ಭಾವಚಿತ್ರವುಳ್ಳ ಆಕರ್ಷಕ ಹೋಲ್ಡಿಂಗ್ಸ್‌ಗಳು, ಪ್ಲೆಕ್ಸ್ ಬೋರ್ಡ್, ದೊಡ್ಡ, ದೊಡ್ಡ ಕಟೌಟ್‌ಗಳು ಎಲ್ಲೆಡೆ ಗಮನ ಸೆಳೆಯುತ್ತಿವೆ.ವಿಪಕ್ಷಗಳಿಗೆ ಉತ್ತರ:
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತವೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಯಿಂದಾಗಿ ಹಣಕಾಸಿನ ಸಮಸ್ಯೆಯಾಗಿದ್ದರೆ ಇಷ್ಟೊಂದು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತಾ? ಎಂಬೆಲ್ಲ ಪ್ರಶ್ನೆಗಳಿಗೆ ಮನೆ ಹಂಚಿಕೆ ಕಾರ್ಯಕ್ರಮ ಉತ್ತರ ನೀಡಲಿದೆ ಎಂಬುದು ಕಾಂಗ್ರೆಸ್ಸಿಗರ ವಾದ.ಫಲಾನುಭವಿಗಳಲ್ಲಿ ಸಂತಸ:ಮನೆಗಳ ಹಸ್ತಾಂತರ ಹಿನ್ನೆಲೆಯಲ್ಲಿ ಫಲಾನುಭವಿಗಳಲ್ಲಿ ಸಂತಸ ಮನೆ ಮಾಡಿದೆ. ಎಷ್ಟೋ ವರ್ಷಗಳಿಂದ ಒಳ್ಳೆಯ ಮನೆಯಿಲ್ಲದೆ, ರಸ್ತೆಯ ಅಕ್ಕಪಕ್ಕ, ರಾಜಕಾಲುವೆಯ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಜೀವನ ಕಳೆದವರಿಗೆ ಸ್ವಂತ ಸೂರಿನ ಕನಸನ್ನು ಕಾಂಗ್ರೆಸ್ ಸಾಕಾರಗೊಳಿಸುತ್ತಿದೆ ಎಂದು ಫಲಾನುಭವಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.--
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅತ್ಯಂತ ಅದ್ಧೂರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿರುವುದು ದೇಶದಲ್ಲೇ ಮೊದಲು.- ಜಮೀರ್ ಅಹ್ಮದ್ ಖಾನ್, ವಸತಿ ಸಚಿವ
----ಭಾಳ ಖುಷಿ ಆಗೈತ್ರಿ.. ಇಸ್ಟ್ ವರ್ಸಾ ಮನಿ ಸಿಗುತ್ತೋ ಇಲ್ವೋ ಅನಿಸಿತ್ತು. ಗುಡಿಸಲ ಹಾಕ್ಕೊಂಡು ಎಲ್ಲೆಲ್ಲೋ ಇದ್ದೀವಿ. ಈಗ ನಮ್ದ ಮನಿ ಆದಂಗ ಆಯ್ತು. ಹಾಲು ಕುಡದಂಗ ಸಂತೋಸಾ ಆಗೈತ್ರಿ...- ಮಂಜವ್ವ, ಫಲಾನುಭವಿ.
-----ಇಂದು ವಿತರಿಸಲಿರುವ ಮನೆಗಳ ಸಂಖ್ಯೆ:ಒಟ್ಟು ಮನೆ- 42,345.
ಎಸ್ಸಿ-ಎಸ್ಟಿ - 20,312ಇತರೆ ವರ್ಗ - 22,033
ಜಿಲ್ಲೆಗಳ ಸಂಖ್ಯೆ- 28ನೆಲಮಹಡಿ - 39,086
ಜಿ+ ಮನೆ - 2,366ಗುಂಪು ಮನೆ - 893