ಜಿಲ್ಲೆಯ ಬ್ಯಾಂಕ್‌ ಖಾತೆಗಳಲ್ಲಿ 43 ಕೋಟಿ ನಿಷ್ಕ್ರಿಯ ಠೇವಣಿ

| Published : Nov 22 2025, 01:30 AM IST

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳ ಒಟ್ಟು ಮೌಲ್ಯ ಸುಮಾರು 43.23 ಕೋಟಿ ರುಪಾಯಿ ಹಣ ಬ್ಯಾಂಕ್ ಹಾಗೂ ಇತರೆ ಶಾಖೆಗಳಲ್ಲಿ ಹಾಗೇ ಉಳಿದಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾಹಿತಿ ನೀಡಿದರು.

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳ ಒಟ್ಟು ಮೌಲ್ಯ ಸುಮಾರು 43.23 ಕೋಟಿ ರುಪಾಯಿ ಹಣ ಬ್ಯಾಂಕ್ ಹಾಗೂ ಇತರೆ ಶಾಖೆಗಳಲ್ಲಿ ಹಾಗೇ ಉಳಿದಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾಹಿತಿ ನೀಡಿದರು.

ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಿಮ್ಮ ಹಣ ನಿಮ್ಮ ಹಕ್ಕು, ಪಡೆಯದ ಠೇವಣಿಗಳ ಇತ್ಯರ್ಥ ಅಭಿಯಾನದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 262 ವಿವಿಧ ಬ್ಯಾಂಕ್ ಶಾಖೆಗಳಿದ್ದು 2,16,806 ಬ್ಯಾಂಕ್ ಖಾತೆಗಳಿದೆ. ಅಭಿಯಾನದ 26,200 ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಗುರಿ ಇದೆ. ಠೇವಣಿ ಹಣದ ವಾರಸುದಾರರ ಪೈಕಿ ಸಾಕಷ್ಟು ಜನ ಕಷ್ಟ ಪಟ್ಟು ದುಡಿದು, ಹಣ ಕೂಡಿಟ್ಟವರು ಇರುತ್ತಾರೆ. ಅದರ ಬಗ್ಗೆ ಅರಿವು ಇರುವುದಿಲ್ಲ. ವಲಸೆಗಾರರು, ಊರು, ಪಟ್ಟಣ ಬಿಟ್ಟವರು, ಬಡವರು, ಹಿಂದುಳಿದವರು ಹೆಚ್ಚಿನವರು ಆಗಿರುತ್ತಾರೆ. ಅಂತಹವರನ್ನು ಪತ್ತೆ ಹಚ್ಚಿ ಅವರ ಹಣ ವಾಪಸ್ ನೀಡಬೇಕು ಎಂದು ಹೇಳಿದರು.

ಡಿ. 31ವರೆಗೆ ಅಭಿಯಾನ:

ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕ್, ವಿಮಾ ಮತ್ತು ಇತರ ಇಲಾಖಾ ಶಾಖೆಗಳಲ್ಲಿ 2025 ರ ಡಿಸೆಂಬರ್ 31ರವರೆಗೆ ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ ನಡೆಯಲಿದೆ. ಅದರಂತೆ, ದೀರ್ಘಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನುಬದ್ಧ ವಾರಸುದಾರರಿಗೆ ಮರುಪಡೆಯಲು ಸಹಾಯ ಮಾಡಲು ಈ ಅಭಿಯಾನ ನಡೆಸಲಾಗುತ್ತಿದ್ದು ಅರ್ಹ ವಾರಸುದಾರರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾತೆದಾರರು ಖುದ್ದಾಗಿ ಕ್ಲೈಮ್ ಮಾಡಲು ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಅಥವಾ ಪಾಸ್ ಬುಕ್, ಗುರುತಿನ ಪುರಾವೆ, ಆಧಾರ್ ಕಾರ್ಡ್,ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಅಥವಾ ಚಾಲನಾ ಪರವಾನಗಿ, ವಿಳಾಸದ ಪುರಾವೆ, ಪಾಸ್ಪೋರ್ಟ್ ಚಾಲನೆ ಪರವಾನಗಿ, ಕ್ರೆಡಿಟ್ ಕಾರ್ಡ್, ಸ್ಟೇಟ್ಮೆಂಟ್, ವೇತನದ ಸ್ಲಿಪ್, ವೋಟರ್ ಐಡಿ, ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯ. ಕಾನೂನು ಬದ್ಧ ವಾರಸುದಾರರು ಅಥವಾ ನಾಮಿನಿ ಕ್ಲೈಮ್ ಮಾಡಲು ಮೂಲ ಖಾತೆದಾರರ ಮರಣ ಪ್ರಮಾಣದ ಪತ್ರದ ಪ್ರತಿ, ಕಾನೂನು ಬದ್ಧ ಉತ್ತರಾಧಿಕಾರಿ ಪ್ರಮಾಣ ಪತ್ರ ಎಲ್ಲಾ ವಾಸುದಾರರಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ(ಅನೇಕ ವಾರಸುದಾರರಿದ್ದಲ್ಲಿ), ಕ್ಲೈಮ್ ಮಾಡುವ ವ್ಯಕ್ತಿಯ ಗುರುತಿನ ಮತ್ತು ವಿಳಾಸದ ಪುರಾವೆ ಅಗತ್ಯ ಎಂದು ವಿವರಿಸಿದರು.

ಕ್ಲೈಮ್ ಮಾಡುವ ವಿಧಾನ:

ಭಾರತೀಯ ರಿಸರ್ವ್ ಬ್ಯಾಂಕ್ ನ ಯು‌ಡಿ‌ಜಿ‌ಎ‌ಎಂ ವೆಬ್ಸೈಟ್ https://udgam.rbi.org.in ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಕ್ಲೈಮ್ ಆಗದಿರುವ ಠೇವಣಿಗಳನ್ನು ಹುಡುಕಬಹುದು.

ಬ್ಯಾಂಕ್ ಶಾಖೆಗೆ ಭೇಟಿ ನೀಡಿ:

ಕ್ಲೈಮ್ ಅನ್ನು ಪ್ರಾರಂಭಿಸಲು ಠೇವಣಿ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಶಾಖೆ ವಿಳಾಸ ತಿಳಿದಿಲ್ಲದಿದ್ದರೆ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ಬ್ಯಾಂಕ್ ನೀಡುವ ಕ್ಲೈಮ್ ಫಾರ್ಮ್ ನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ರಸೀದಿಯನ್ನು ಪಡೆದುಕೊಳ್ಳಬಹುದು. ದಾಖಲೆಯ ಪರಿಶೀಲನೆಯ ನಂತರ ಬ್ಯಾಂಕ್ ಕ್ಲೈಮ್ ಅನ್ನು ಸಂಸ್ಕರಿಸಿ ಹಣವನ್ನು ಮರಳಿ ನೀಡುತ್ತದೆ. ಅರ್ಜಿ ಸಲ್ಲಿಸಿದ 15 ದಿನದೊಳಗೆ ಠೇವಣಿ ಹಣ ವಾಪಾಸ್ ನೀಡದಿದ್ದಲ್ಲಿ ಶೇಕಡ ಹತ್ತರಷ್ಟು ದಂಡವನ್ನು ಬ್ಯಾಂಕ್ ನವರು ಭರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್, ಆರ್ ಬಿಐ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸೂರಜ್ ಶ್ರೀ, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ರಾಮಾಂಜಿ, ಮ್ಯಾನೇಜರ್ ಜೈ ಶೇಖರ್, ವಿವಿಧ ಬ್ಯಾಂಕ್ ಮ್ಯಾನೇಜರ್ ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

21ಕೆಡಿಬಿಪಿ1-

ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನಕ್ಕೆ ಚಾಲನೆ ನೀಡಿ, ಭಿತ್ತಿಪತ್ರ ಅನಾವರಣಗೊಳಿಸಿ ಮಾಹಿತಿ ನೀಡಿದರು.