ಗಾಳಿ, ಮಳೆಗೆ 447 ಮರಗಳು ಬುಡಮೇಲು

| Published : Jun 08 2024, 01:20 AM IST / Updated: Jun 08 2024, 10:06 AM IST

ಸಾರಾಂಶ

ಭಾರಿ ಮಳೆ ಹಾಗೂ ಗಾಳಿಯಿಂದ ಬಿದ್ದ ಮರ ಹಾಗೂ ಮರದ ಕೊಂಬೆಯನ್ನು ಬಿಬಿಎಂಪಿ ಅರಣ್ಯ ವಿಭಾಗ ಕತ್ತರಿಸಿ ರಸ್ತೆ ಬದಿ ಹಾಕಿರುವುದರಿಂದ ಅನೇಕ ಕಡೆ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ.

  ಬೆಂಗಳೂರು :  ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಬಿದ್ದ ಮರ ಹಾಗೂ ಮರದ ಕೊಂಬೆಯನ್ನು ಬಿಬಿಎಂಪಿ ಅರಣ್ಯ ವಿಭಾಗ ಕತ್ತರಿಸಿ ರಸ್ತೆ ಬದಿ ಹಾಕಿರುವುದರಿಂದ ಅನೇಕ ಕಡೆ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ.

ಮಳೆ ಗಾಳಿಗೆ ಜೂನ್‌ 2 ರಿಂದ ಈ ವರೆಗೆ ಒಟ್ಟು 447 ಮರಗಳು ಬುಡಮೇಲಾಗಿ ಬಿದ್ದಿದ್ದು, 1126 ಮರದ ಕೊಂಬೆಗಳು ಮುರಿದು ಬಿದ್ದಿವೆ. ಇವುಗಳನ್ನು ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಕತ್ತರಿಸಿ ರಸ್ತೆಯ ಎಡ-ಬಲ ಭಾಗ ಮತ್ತು ಪಾದಚಾರಿ ಮಾರ್ಗ ಹಾಕಿದ್ದಾರೆ. ಇದರಿಂದ ವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ.

ಗಣ್ಯರು, ಪ್ರಭಾವಿಗಳ ವಾಸಿಸುವ ಬಡಾವಣೆ, ರಸ್ತೆಗಳಲ್ಲಿ ಬಿದ್ದಿರುವ ಮರ ಮತ್ತು ಮರದ ಕೊಂಬೆಗಳನ್ನು ಮಾತ್ರ ತೆರವು ಮಾಡುತ್ತಿದ್ದು, ಜನ ಸಾಮಾನ್ಯರ ವಾಸಿಸುವ ಪ್ರವೇಶಗಳ ಕಡೆ ಗಮನ ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

695 ಕಡೆ ರಸ್ತೆಯಲ್ಲಿ ಬಿದ್ದ ಮರ ಕೊಂಬೆಗಳು:

ಒಟ್ಟು 1,573 ಕಡೆ ಮರ ಮತ್ತು ಮರದ ಕೊಂಬೆಗಳನ್ನು ಕತ್ತರಿಸಿ ರಸ್ತೆಯಲ್ಲಿ ಹಾಕಲಾಗಿತ್ತು. ಈ ಪೈಕಿ 905 ಕಡೆ ಮಾತ್ರ ತೆರವು ಮಾಡಲಾಗಿದೆ. ಇನ್ನೂ 695 ಕಡೆ ತೆರವು ಮಾಡುವುದು ಬಾಕಿ ಇದೆ.

ಬಿದ್ದ ಮರಗಳ ತೆರವಿಗೆ 1533ಗೆ ಕರೆ ಮಾಡಿ

ಬಿದ್ದಿರುವ ಮರ ಹಾಗೂ ಮರದ ಕೊಂಬೆ ತೆರವಿಗೆ ಬಿಬಿಎಂಪಿಯ ಉಚಿತ ಸಹಾಯವಾಣಿ ಸಂಖ್ಯೆ 1533ಗೆ ಕರೆ ಮಾಡಿ ದೂರು ದಾಖಲಿಸುವಂತೆ ಬಿಬಿಎಂಪಿ ಮನವಿ ಮಾಡಿದೆ.