ಮೂರು ಪಂಚಾಯ್ತಿಗೆ ಒಂದರಂತೆ 3674 ಕೆಪಿಎಸ್ ಶಾಲೆ ಆರಂಭಿಸಿ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಸರ್ಕಾರ ಹುನ್ನಾರ ನಡೆಸಿದೆ.
ಧಾರವಾಡ:
ಕೆಪಿಎಸ್ ಮ್ಯಾಗ್ನೆಟ್ ನೀತಿ ಹಾಗೂ ಏಷ್ಯನ್ ಡೆವಲಪಮೆಂಟ್ ಬ್ಯಾಂಕ್ (ಎಡಿಬಿ) ಸಾಲದ ಒಪ್ಪಂದದ ಮೂಲಕ ರಾಜ್ಯದ 45 ಸಾವಿರ ಸರ್ಕಾರಿ ಶಾಲೆ ಮುಚ್ಚುತ್ತಿರುವುದು, ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ವಿನಯ ಚಂದ್ರ ಖಂಡಿಸಿದರು.ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಪಂಚಾಯ್ತಿಗೆ ಒಂದರಂತೆ 3674 ಕೆಪಿಎಸ್ ಶಾಲೆ ಆರಂಭಿಸಿ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಸರ್ಕಾರ ಹುನ್ನಾರ ನಡೆಸಿದ್ದು, ಈ ಯೋಜನೆ ಜಾರಿಯಾದರೆ ಧಾರವಾಡ ಜಿಲ್ಲೆಯೊಂದರಲ್ಲಿಯೇ 600ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತವೆ. ಕೆಪಿಎಸ್ ಯೋಜನೆಗಾಗಿ ರಾಜ್ಯ ಸರ್ಕಾರ ಎಡಿಬಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಈ ನೀತಿ ವಿರುದ್ಧ ಪ್ರಬಲ ಹೋರಾಟ ಬೆಳೆಸಲು ಸಂಘಟನೆಯು ರಾಜ್ಯಾದ್ಯಂತ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚನೆ ಮಾಡಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳನ್ನು ಒಗ್ಗೂಡಿಸುತ್ತಿದೆ ಎಂದರು.
ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಕೆಪಿಎಸ್ ಶಾಲೆಗಳ ನಿರ್ವಹಣೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡಲು ಯೋಜಿಸಿದೆ. ಶಾಲೆ ನಡೆಸಲು ಆರ್ಥಿಕ ನೆರವು, ಆಡಳಿತ ಮಂಡಳಿ, ಶಿಕ್ಷಕರನ್ನು ಒದಗಿಸುವುದು ಹಾಗೂ ಕಟ್ಟಡ ಸೇರಿದಂತೆ ಮುಂತಾದ ಸೌಲಭ್ಯ ಒದಗಿಸುವ ಜವಾಬ್ದಾರಿ ಕಾರ್ಪೋರೇಟ್ ಸಂಸ್ಥೆಯದ್ದಾಗಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದಲ್ಲಿ 2 ಸಾವಿರ ಶಾಲೆಗಳನ್ನು ಕಾರ್ಪೋರೇಟ್ ಕೈಗೊಪ್ಪಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಕಾರ್ಪೋರೇಟ್ ನಿಯಂತ್ರಣಕ್ಕೆ ಒಪ್ಪಿಸುವುದನ್ನು ನಾವು ವಿರೋಧಿಸುತ್ತಿದ್ದೇವೆ. ಅಲ್ಲದೇ, 6 ತರಗತಿಯಿಂದ ಕೌಶಲ್ಯ ಕಲಿಸಲಾಗುವುದು ಎಂಬುದು ತಪ್ಪು ನಿರ್ಧಾರ. ಈ ಎಲ್ಲ ವಿಷಯಗಳನ್ನು ಬರುವ ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟಿಸಲಿದ್ದೇವೆ ಎಂದು ಸರ್ಕಾರದ ನೀತಿ ಖಂಡಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಸಿಂಧೂ ಕೌದಿ, ಕಾರ್ಯದರ್ಶಿ ಶಶಿಕಲಾ ಮೇಟಿ, ಮಲ್ಲೇಶ ಕಟಗಿ, ರೆಹಮಾನ ಅಂಗಡಿ ಇದ್ದರು.