45ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸಂಪನ್ನ

| Published : Oct 27 2023, 12:30 AM IST / Updated: Oct 27 2023, 12:31 AM IST

ಸಾರಾಂಶ

ಈ ಬಾರಿ ಪ್ರಥಮ ಬಹುಮಾನವನ್ನು ಸ್ನೇಹಿತರ ಬಳಗ ಕೊಪ್ಪ ಹಾಗೂ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ಸಮನಾಗಿ ಹಂಚಿಕೊಂಡವು. ಅರುವತ್ತೋಕ್ಲುವಿನ ಶಾರದಾಂಭ, ದ್ವಿತೀಯ ಹಾಗೂ ಎರಡನೇ ವಿಭಾಗದ ಯುವ ದಸರಾ ಸಮಿತಿ ತೃತೀಯ ಬಹುಮಾನಕ್ಕೆ ಭಾಜನವಾದವು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರೀ ಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ನಡೆದ 45ನೇ ವರ್ಷದ ಗೋಣಿಕೊಪ್ಪ ದಸರಾಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು. ದಶಮಂಟಪಗಳು ಶೋಭಾಯಾತ್ರೆಯಲ್ಲಿ ಗಮನ ಸೆಳೆದವು. ನಿರೀಕ್ಷೆಗೂ ಮೀರಿ ಮಂಟಪಗಳು ಹಲವು ಕಲಾಕೃತಿಗಳನ್ನು ಜನತೆಗೆ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಈ ಬಾರಿ ಪ್ರಥಮ ಬಹುಮಾನವನ್ನು ಸ್ನೇಹಿತರ ಬಳಗ ಕೊಪ್ಪ ಹಾಗೂ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ಸಮನಾಗಿ ಹಂಚಿಕೊಂಡವು. ಅರುವತ್ತೋಕ್ಲುವಿನ ಶಾರದಾಂಭ, ದ್ವಿತೀಯ ಹಾಗೂ ಎರಡನೇ ವಿಭಾಗದ ಯುವ ದಸರಾ ಸಮಿತಿ ತೃತೀಯ ಬಹುಮಾನಕ್ಕೆ ಭಾಜನವಾದವು. ಪ್ರತಿವರ್ಷ ಬಹುಮಾನ ವಿತರಣೆ ಸಂದರ್ಭ ಹಲವು ಗೊಂದಲಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಎಚ್ಚರ ವಹಿಸಲಾಗಿತ್ತು. 4 ತೀರ್ಪುಗಾರರು ತಮ್ಮ ತೀರ್ಪನ್ನು ಉತ್ತಮವಾಗಿ ನೀಡಿರುವುದನ್ನು ನಾಗರಿಕರು ಹಾಗೂ ಮಂಟಪಗಳ ಅಧ್ಯಕ್ಷರು ಶ್ಲಾಘಿಸಿದರು. ಬಹುಮಾನಕ್ಕೆ ಅರ್ಹತೆ ವಿಚಾರವನ್ನು ಸಾರ್ವಜನಿಕವಾಗಿ ದಶಮಂಟಪಗಳ ಅಧ್ಯಕ್ಷರ ಸಮ್ಮುಖದಲ್ಲಿ ತೀರ್ಪುಗಾರರಾದ ಚಂದನ್, ಮಂಜುನಾಥ್ ಹಾಗೂ ದಿಲನ್ ಚಂಗಪ್ಪ ಮಂಡಿಸಿದರು. ಇದರಿಂದ ಮಂಟಪದ ಅಧ್ಯಕ್ಷರು ಬಹುಮಾನದ ಪಾರದರ್ಶಕತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ನಿಗಧಿತ ಸಮಯದಲ್ಲಿ ಬಸ್ ನಿಲ್ದಾಣಕ್ಕೆ ಮಂಟಪಗಳು ಬಾರದೆ ಇರುವುದರಿಂದ ಸಹಜವಾಗಿಯೇ ನಾಗರಿಕರು ತಮ್ಮ ನೋವನ್ನು ತೋಡಿಕೊಂಡರು. ಮುಂಜಾನೆಯ 7 ಗಂಟೆಯವರೆಗೂ ಮಂಟಪಗಳು ಪ್ರದರ್ಶನ ನೀಡಿದವು. ವಾಹನ ಸಂಚಾರಕ್ಕೆ ಮುಂಜಾನೆ ವೇಳೆ ವ್ಯೆತ್ಯಾಸ ಕಂಡು ಬಂತು. ಸರ್ಕಲ್ ಇನ್ಸ್ಫೆಕ್ಟರ್ ಗೋವಿಂದರಾಜ್ ಈ ಬಗ್ಗೆ ಸಮಿತಿಯ ಪ್ರಮುಖರಿಗೆ ಮಾಹಿತಿ ತಿಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಕೆಲ ಸಮಯದ ನಂತರ ಮುಖ್ಯ ರಸ್ತೆಯಲ್ಲಿ ಎಂದಿನಂತೆ ವಾಹನ ಓಡಾಟಗಳು ಆರಂಭವಾದವು. ಕಾವೇರಿ ದಸರಾ ಸಮಿತಿಯು ಸ್ವಾತಂತ್ರ್ಯ ಭವನದಲ್ಲಿ 10 ದಿನಗಳ ಕಾಲ ಚಾಮುಂಡೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿ, ನವರಾತ್ರಿಯಂದು ಪ್ರತಿಮೆಯನ್ನು ಮುಂಜಾನೆಯ ಸೀಗೆತೋಡಿನಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಸರ್ಜಿಸಲಾಯಿತು. ಮುಂಜಾನೆಯ ವೇಳೆ ಬಸ್ ನಿಲ್ದಾಣದಲ್ಲಿ ಮಂಟಪಗಳಿಗೆ ಬಹುಮಾನವನ್ನು ಸಮಿತಿಯ ವತಿಯಿಂದ ವಿತರಿಸಲಾಯಿತು. ಈ ವೇಳೆ ಅಧ್ಯಕ್ಷರಾದ ಪ್ರಮೋದ್ ಗಣಪತಿ,ಉಪಾಧ್ಯಕ್ಷರಾದ ಶಿವಾಜಿ ಕಾರ್ಯದರ್ಶಿ ಕಂದಾದೇವಯ್ಯ, ಸಮಿತಿಯ ಪ್ರಮುಖರಾದ ಚಂದನ್‌ಮಂಜುನಾಥ್, ದಿಲನ್ ಚಂಗಪ್ಪ, ಗುರುರಾಜ್ ಬಿ.ಎನ್. ಪ್ರಕಾಶ್ ಹಾಗೂ ವೃತ್ತ ನಿರೀಕ್ಷಕ ಗೋವಿಂದರಾಜ್ ಹಾಜರಿದ್ದರು. ಕೈಕೇರಿ ಭಗವತಿ, 2ನೇ ವಿಭಾಗದ ಯುವ ದಸರಾ ಸಮಿತಿ ಮೈಸೂರಮ್ಮ ನಗರದ ಶಾರದಾಂಭ ಸಮಿತಿ, ಮಾರ್ಕೆಟ್ ಭಾಗದ ನವಚೇತನ ದಸರಾ ಸಮಿತಿ,3ನೇ ವಿಭಾಗದ ಸರ್ವರ ದಸರಾ ಸಮಿತಿ,ಅರುವತ್ತೋಕ್ಲುವಿನ ಕಾಡ್ಲಯ್ಯಪ್ಪ ದಸರಾ ಸಮಿತಿ,ಕೊಪ್ಪದ ಸ್ನೇಹಿತರ ಬಳಗ,ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ,ಆಸ್ಪತ್ರೆ ಹಿಂಭಾಗದ ನಾಡಹಬ್ಬ ದಸರಾ ಸಮಿತಿ ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿ ಹೊತ್ತ ಮಂಟಪವನ್ನು ನವಮಂಟಪಗಳು ಹಿಂಬಾಲಿಸಿದವು. ಪ್ರತಿ ಮಂಟಪದಲ್ಲಿ ಕ್ರೇನ್, ಟ್ರಾಕ್ಟರ್, ಜೆಸಿಬಿ ಬಳಸಲಾಗಿತ್ತು. ದಶಮಂಟಪಗಳಿಗೆ ನಿಗದಿತ ಸಮಯದಲ್ಲಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಪ್ರದರ್ಶನ ನೀಡಬೇಕೆಂಬ ನಿರ್ದೇಶನವಿದ್ದರೂ ನಿಗದಿತ ಸಮಯದಲ್ಲಿ ಮಂಟಪಗಳು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬಿಗಿ ಬಂದೋಬಸ್ತ್‌: ನಗರದಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿತ್ತು. ಪೊಲೀಸರು ಆಯಾಕಟ್ಟಿನ ಪ್ರದೇಶದಲ್ಲಿ ಗಸ್ತು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಭಾರ ಡಿವೈಎಸ್ಪಿ ಸುಂದರ್‌ರಾಜ್ ಮುಂದಾಳತ್ವದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಗೋಣಿಕೊಪ್ಪ ಸಿಪಿಐ ಗೋವಿಂದರಾಜು, ಮಂಜಪ್ಪ, ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಸೇರಿದಂತೆ ವಿರಾಜಪೇಟೆ, ಕುಟ್ಟ ಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಂಡರು. ವಾಲಗಕ್ಕೆ ಹೆಜ್ಜೆ ಹಾಕಿದ ಯುವಜನತೆ: ಈ ಬಾರಿ ಡಿಜೆ ಪ್ರದರ್ಶನಕ್ಕೆ ಹಿನ್ನಡೆಯಾಗುವ ಹಿನ್ನಲೆಯಲ್ಲಿ ಅನೇಕ ಮಂಟಪಗಳು ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಒತ್ತು ನೀಡಿದ್ದರು. ಕೊಡಗಿನ ವಾಲಗಕ್ಕೆ ನಾಗರಿಕರು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.