ದೇಗುಲ ಹುಂಡಿಯಲ್ಲಿ ₹46.77 ಲಕ್ಷ ಹಣ ಸಂಗ್ರಹ

| Published : May 29 2024, 12:50 AM IST

ಸಾರಾಂಶ

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಎ ಶ್ರೇಣಿಯ ಮುಜರಾಯಿ ಇಲಾಖೆಗೆ ಸೇರಿದ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಹುಂಡಿ ಹಣ ಎಣಿಕೆ ಮಾಡಲಾಯಿತು. ಒಟ್ಟು ₹46.77 ಲಕ್ಷ ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿ ಸುಂಕದಕಟ್ಟೆ ದೇಗುಲದಲ್ಲಿ ತಹಸೀಲ್ದಾರ್‌ ಪುರಂದರ ಹೆಗ್ಡೆ ಮಾಹಿತಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸುಂಕದಕಟ್ಟೆ ಗ್ರಾಮದ ಎ ಶ್ರೇಣಿಯ ಮುಜರಾಯಿ ಇಲಾಖೆಗೆ ಸೇರಿದ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಹುಂಡಿ ಹಣ ಎಣಿಕೆ ಮಾಡಲಾಯಿತು. ಒಟ್ಟು ₹46.77 ಲಕ್ಷ ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.

ಮಂಗಳವಾರ ಗ್ರಾಮದ ಸಮುದಾಯ ಭವನದಲ್ಲಿ ಹುಂಡಿ ಹಣ ಎಣಿಕೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಜರಾಯಿ ಇಲಾಖೆಗೆ ಸೇರಿದ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಸ್ಥಾನ ಮಧ್ಯ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ದೇವಸ್ಥಾನ ಅಭಿವೃದ್ಧಿಗೆ ಸಮಿತಿಯವರು ಮನವಿ ಮಾಡಿದ್ದಾರೆ. ಈ ಮನವಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ದೇವಾಸ್ಥನದ ಹುಂಡಿ ಎಣಿಕೆ ಕಾರ್ಯ ವರ್ಷದಲ್ಲಿ ಎರಡು ಬಾರಿ ಮಾಡಲಾಗುತ್ತದೆ. ಇದರಿಂದ ಸಂಗ್ರಹವಾದ ಹಣವನ್ನು ಕೆನರಾ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗುತ್ತದೆ. ಈ ಹಿಂದೆ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯವನ್ನು 2023ರ ಅಕ್ಟೋಬರ್‌ನಲ್ಲಿ ನಡೆಸಲಾಗಿತ್ತು. ಸುಮಾರು 7 ತಿಂಗಳ ನಂತರ ಇದೀಗ ದೇವಾಲಯದ ಕಾಣಿಕೆ ಹುಂಡಿ ಹಣ ಎಣಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದೇವಾಲಯ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸುಂಕದಕಟ್ಟೆ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿಗೆ ಬರುವ ಭಕ್ತರ ವಿಶ್ರಾಂತಿ ಕೊಠಡಿಗಳು ದುರಸ್ತಿಯಲ್ಲಿವೆ. ಹಳೇ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸ, ನೂತನವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ, ಭಕ್ತರ ನಿವಾಸಕ್ಕೆ ಅವಕಾಶ ಮಾಡಿಕೊಡುವಂತೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ ಎಂದರು.

ದೇವಸ್ಥಾನ ಆವರಣದಲ್ಲಿ ಭಕ್ತರ ವಿಶ್ರಾಂತಿ ಕೊಠಡಿಗಳಲ್ಲಿ ವಿದ್ಯುತ್ ದುರಸ್ತಿಯಾಗಿಲ್ಲ. ಇಲ್ಲದಿದ್ದರೆ ಭಕ್ತರು ತಂಗುವುದಕ್ಕೆ ಅಸಾಧ್ಯ. ಆದ್ದರಿಂದ ಜಿಲ್ಲಾಧಿಕಾರಿ ಅವರು ₹25 ಲಕ್ಷ ವೆಚ್ಚದಲ್ಲಿ ವಿದ್ಯುತ್ ಹಾಗೂ ಇನ್ನಿತರ ದುರಸ್ತಿಗೆ ಕ್ರಿಯಾಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದರು.

ಭಕ್ತರು ನೀಡಿರುವ ಕಾಣಿಕೆ ಹಣ ಬ್ಯಾಂಕಿನಲ್ಲಿದ್ದು, ಅದರಿಂದ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಮುದಾಯ ಭವನ ಇನ್ನೂ ಕಾಮಗಾರಿ ಹಂತದಲ್ಲೇ ಇದೆ. ಇದಕ್ಕೆ ಇನ್ನೂ ₹1 ಕೋಟಿ ಅನುದಾನದ ಕೊರತೆ ಇದೆ. ನಾವು ಸಹ ಮುಜರಾಯಿ ಆಯಕ್ತರಿಗೆ ಪತ್ರ ಬರೆದು ₹1 ಕೊಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಪ್ರಧಾನ ಅರ್ಚಕ ರಾಜುಸ್ವಾಮಿ, ಸಮಿತಿ ಸದಸ್ಯರಾದ ಎಸ್.ಕೆ. ಕರಿಯಪ್ಪ, ಅಣ್ಣಪ್ಪ, ಎಸ್.ಎನ್. ಪ್ರಸನ್ನ, ಗೌರಮ್ಮ, ಚಂದ್ರಮ್ಮ, ರಾಕೇಶ್, ಬ್ಯಾಂಕ್ ಅಧಿಕಾರಿ ರಾಮಣ್ಣ, ಗ್ರಾ.ಪಂ. ಸದಸ್ಯ ಶ್ರೀನಾಥ್, ರಾಜಸ್ವ ನಿರೀಕ್ಷಕ ರಮೇಶ್, ಚಂದ್ರಕಲಾ, ದಿನೇಶ್, ರೇಣುಕಮ್ಮ, ರಶ್ಮಿ ಹಾಗೂ ಇತರರು ಇದ್ದರು.

- - - -28ಎಚ್.ಎಲ್.ಐ3:

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಶ್ರೀ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಕಂದಾಯ ಇಲಾಖೆ ಸಿಬ್ಬಂದಿ, ಹಾಗೂ ಬ್ಯಾಂಕ್ ಅಧಿಕಾರಿಗಳು ಎಣಿಕೆ ಮಾಡಿದರು.