ಸಾರಾಂಶ
ವಸ್ತುಪ್ರದರ್ಶನ ಅಭಿವೃದ್ಧಿಗೆ ಮಾತ್ರವಲ್ಲದೆ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.ವಸ್ತುಪ್ರದರ್ಶನದ ಅಭಿವೃದ್ಧಿಗೆ 47 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಮೊದಲ ಹಂತದಲ್ಲಿ 20 ಕೋಟಿ ಅನುದಾನವನ್ನು ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ವಸ್ತುಪ್ರದರ್ಶನ ಅಭಿವೃದ್ಧಿಗೆ ಮಾತ್ರವಲ್ಲದೆ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಪ್ರಾಧಿಕಾರದ ಆವರಣದಲ್ಲಿರುವ ಎ ಬ್ಲಾಕ್ ನಲ್ಲಿ ಒಟ್ಟು 154 ವಾಣಿಜ್ಯ ಮಳಿಗೆಗಳಿವೆ. ಇವು 20 ವರ್ಷಗಳ ಹಳೆಯ ಮಾದರಿಯಲ್ಲಿದ್ದು, ದಸರಾ ಸಮಯದಲ್ಲಿ 3 ತಿಂಗಳು ಮಾತ್ರ ಉಪಯೋಗಿಸಲಾಗುತ್ತಿದೆ. ಈ ಪ್ರದೇಶವನ್ನು ಹಳೇಬೀಡು ಶೈಲಿಯಲ್ಲಿ ಎಫ್‌ಆರ್ ಪಿ ಬಳಸಿ ನವೀಕರಿಸಲಾಗುವುದು. ಜೊತೆಗೆ ಅಂತರ ರಾಜ್ಯ ಹಾಗೂ ರಾಜ್ಯದ ಎಲ್ಲಾ ಕಲೆ ಮತ್ತು ಸಂಸ್ಕೃತಿಗಳಿಗೆ ಮೊದಲ ಆದ್ಯತೆ ನೀಡಿ ಅವಕಾಶ ಮಾಡಿಕೊಡಲಾಗುವುದು ಎಂದರು.ಇದರಿಂದ ದಸರಾ ಹೊರತುಪಡಿಸಿ ಉಳಿದ 8 ತಿಂಗಳು ಪ್ರತಿ ತಿಂಗಳು 10 ರಿಂದ 15 ದಿನಗಳ ವಸ್ತುಪ್ರದರ್ಶನ ಆಯೋಜಿಸಿದಲ್ಲಿ ಪ್ರಾಧಿಕಾರಕ್ಕೆ ವಾರ್ಷಿಕ 1 ಕೋಟಿ ಆದಾಯ ಬರುತ್ತದೆ. ಇದಕ್ಕಾಗಿ 10 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಕಾರಂಜಿಗಳ ಅಭಿವೃದ್ಧಿಪ್ರಾಧಿಕಾರದ ಸಂಗೀತ ಮತ್ತು ಬೆಳಕಿನ ಕಾರಂಜಿ ಪ್ರಮುಖ ಆಕರ್ಷಣೆಯಾಗಿದೆ. ಇವು 20 ವರ್ಷಗಳ ಹಳೆಯದಾಗಿದ್ದು, ಕಾರ್ಯ ನಿರ್ವಹಿಸಲು ಯೋಗ್ಯವಾದ ಸ್ಥಿತಿಯಲ್ಲಿಲ್ಲ. ಪ್ರತಿ ವರ್ಷ ದಸರಾ ವಸ್ತುಪ್ರದರ್ಶನ ನಡೆಯುವ ಸಮಯದಲ್ಲಿ 35 ಲಕ್ಷ ರೂ. ರಿಪೇರಿ ಕಾಮಗಾರಿಗೆ ವೆಚ್ಚವಾಗುತ್ತಿದೆ. ಹೀಗಾಗಿ, ಈ ಕಾರಂಜಿಗಳನ್ನು ವರ್ಷಪೂರ್ತಿ ಚಾಲ್ತಿಗೊಳಿಸಿ ಸಾರ್ವಜನಿಕರು, ಪ್ರವಾಸಿಗರನ್ನು ಆಕರ್ಷಿಸಲು 10 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿಸಲಾಗುತ್ತಿದೆ ಎಂದರು.ಪ್ರತಿ ದಿನ ಸಂಜೆ ಪ್ರವಾಸಿಗರಿಗೆ ಸಂಗೀತ ಕಾರಂಜಿ ವೀಕ್ಷಿಸಲು ಅವಕಾಶ ನೀಡಲಾಗುವುದು. ಇದರಿಂದ ಪ್ರಾಧಿಕಾರಕ್ಕೆ ವಾರ್ಷಿಕವಾಗಿ ಅಂದಾಜು 1.50 ಕೋಟಿ ಆದಾಯ ಬರುತ್ತದೆ. ಈ ಎರಡೂ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಮುಗಿಯಲಿದ್ದು, ಏಪ್ರಿಲ್ ನಲ್ಲಿ ಕಾಮಗಾರಿ ಆರಂಭಿಸಿ ದಸರಾ ವೇಳೆಗೆ ಪೂರ್ಣಗೊಳಿಸಲಾಗುವುದು. ಅಲ್ಲದೆ ಜುರಾಸಿಕ್ ಪಾರ್ಕ್ ನಿರ್ಮಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ವಸ್ತುಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ ಎಂದರು.ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಸಿಇಒ ಕೆ. ರುದ್ರೇಶ್ ಇದ್ದರು.----ಕೋಟ್...ಮಾಜಿ ಸಂಸದ ಪ್ರತಾಪ್ ಸಿಂಹ ಸ್ವದೇಶಿ ದರ್ಶನ ಯೋಜನೆಯಲ್ಲಿ ವಸ್ತುಪ್ರದರ್ಶನಕ್ಕೆ ಅನುದಾನ ಬಂದಿದೆ ಎಂದು ತಪ್ಪು ಮಾಹಿತಿ ನೀಡಿದ್ದರು. ಆದರೆ, ಇಲ್ಲಿಯವರೆಗೆ ನಯಾ ಪೈಸೆ ಅನುದಾನ ಬಂದಿಲ್ಲ. ಈ ಸಂಬಂಧ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.- ಅಯೂಬ್ ಖಾನ್, ಅಧ್ಯಕ್ಷ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ----ವರ್ಷದ 365 ದಿನವೂ ವಸ್ತುಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಈಗ ಕೈಗೆತ್ತಿಕೊಂಡಿರುವ ಕಾಮಗಾರಿ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ಜನವರಿಯಿಂದ ಈ ಯೋಜನೆ ಜಾರಿಗೆ ಬರಲಿದೆ.- ಕೆ. ರುದ್ರೇಶ್, ಸಿಇಒ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ