ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ 496 ಡೆಂಘೀ ಸಕ್ರಿಯ ಪ್ರಕರಣಗಳಿದ್ದು, 14 ಪಾಸಿಟಿವ್ ಪ್ರಕರಣಗಳಿವೆ. ಡೆಂಘೀ ತಡೆಗೆ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಗಾಲ ಆರಂಭವಾದ ಬಳಿಕ ಡೆಂಘೀ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 3595 ಜನರು ಡೆಂಘಿ ಪರೀಕ್ಷೆಗೆ ಒಳಗಾಗಿದ್ದು, 496 ದೃಢಪಟ್ಟಿದೆ. ಸಮುದಾಯ ಆರೋಗ್ಯಾಧಿಕಾರಿ ಸ್ವಯಂ ಔಷಧ ಸೇವಿಸಿದ್ದರಿಂದ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದರು.
ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಕುಸಿದಿದೆ. ಮೈಸೂರು ನಗರದ ಬಳಿಕ ಹುಣಸೂರು ತಾಲೂಕಿನಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಬರುತ್ತಿದೆ ಎಂದರು.ಆಷಾಢ ಶುಕ್ರವಾರಗಳಿಗೆ ಪಾಸ್ ಇಲ್ಲ:
ಅಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟಕ್ಕೆ ತೆರಳುವವರಿಗೆ ಯಾವುದೇ ಪಾಸ್ ವ್ಯವಸ್ಥೆ ನೀಡುವುದಿಲ್ಲ. ಹಿಂದಿನ ವರ್ಷ ಪಾಸ್ ನೀಡದೇ ಉತ್ತಮವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅದೇ ಮಾದರಿಯನ್ನು ಈ ವರ್ಷವೂ ಮುಂದುವರಿಸುವಂತೆ ಹೇಳಿದ್ದೇನೆ. ನನಗೂ ಪಾಸ್ ಇರುವುದಿಲ್ಲ ಎಂದರು.ಪಾರ್ಕಿಂಗ್ ತೊಂದರೆ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಮತ್ತೊಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ. ಮುಂಜಾನೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿ ದರ್ಶನ ಪಡೆಯಬಹುದು ಎಂದರು.
10 ರಿಂದ ಕಬಿನಿ ನಾಲೆಗೆ ನೀರು:ಕಬಿನಿ ಜಲಾಶಯದಲ್ಲಿ 81 ಅಡಿ ನೀರು ಸಂಗ್ರಹವಾಗಿದೆ. ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಸಲುವಾಗಿ ಜು.10 ರಿಂದ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಒಳ ಹರಿವಿನ ಪ್ರಮಾಣ ನೋಡಿಕೊಂಡು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡುವುದಾಗಿ ಅವರು ಹೇಳಿದರು.
ಸೆಕ್ಷನ್ 7ಡಿ ರದ್ದು:ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಿರುವ ಸೆಕ್ಷನ್ 7ಡಿ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರದ್ದು ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸೆಕ್ಷನ್ 7ಡಿ ಮೂಲಕ ಹಿಂದಿನ ಬಿಜೆಪಿ ಸರ್ಕಾರ ದಲಿತರಿಗೆ ಮೀಸಲಿಟ್ಟ ಅನುದಾನದಲ್ಲಿ 10 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ವಿಪಕ್ಷ ನಾಯಕರು, ರಾಜಕೀಯ ನಾಯಕರು ಗುಲ್ಲೆಬ್ಬಿಸುತ್ತಿದ್ದಾರೆ ಎಂದರು.ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ 10 ಸಾವಿರ ರು. ಸಹಾಯ ಧನ ನೀಡಲಾಗುತ್ತಿದ್ದನ್ನು 15 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಸುಸಜ್ಜಿತ ಹಾಸ್ಟೆಲ್, ಹೈಟೆಕ್ ಗ್ರಂಥಾಲಯ ಸ್ಥಾಪನೆಗೂ ಚಿಂತಿಸಲಾಗಿದೆ ಎಂದರು. ಡೆಂಘೀ ಜ್ವರಕ್ಕೆ ಮೈಸೂರಿನಲ್ಲಿ ಮತ್ತೊಂದು ಬಲಿ?
ಕನ್ನಡಪ್ರಭ ವಾರ್ತೆ ಮೈಸೂರುಶಂಕಿತ ಡೆಂಘೀ ಜ್ವರದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ಭಾನುವಾರ ನಡೆದಿದೆ.ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆರೇಟರ್ ಲಲಿತಾ (32) ಎಂಬವರೇ ಮೃತಪಟ್ಟವರು. ಇವರು ತೀವ್ರ ಜ್ವರದಿಂದ ಕಳೆದ ಸೋಮವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಾಥಮಿಕ ಪರೀಕ್ಷೆಯಲ್ಲಿ ಡೆಂಘೀ ಪಾಸಿಟಿವ್ ಇರುವುದು ದೃಢವಾಗಿದ್ದು, ನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಪ್ಲೇಟ್ ಲೆಟ್ಸ್ ಕಡಿಮೆಯಾಗಿದೆ. ಬಹು ಅಂಗಾಂಗಗಳ ಕಾರ್ಯವೈಖರಿಯಲ್ಲೂ ವ್ಯತ್ಯಾಸವಾಗಿದೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಲಲಿತಾ ಅವರ ಡೆತ್ ಆಡಿಟ್ ನಡೆಯುತ್ತಿದ್ದು, ಒಂದು ವೇಳೆ ಡೆಂಘೀಯಿಂದ ದೃಢಪಟ್ಟಲ್ಲಿ ಮೈಸೂರಿನಲ್ಲಿ ಡೆಂಘೀಗೆ ವೈದ್ಯಕೀಯ ಕ್ಷೇತ್ರದ 2ನೇ ವ್ಯಕ್ತಿ ಬಲಿಯಾದಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಹುಣಸೂರಿನಲ್ಲಿ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ (34) ಡೆಂಘೀ ಜ್ವರದಿಂದ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.