ನಾಲ್ವಡಿ ಬಗ್ಗೆ ಹೆಚ್ಚಿನ ಅರಿವಿರಲಿ

| Published : Aug 04 2024, 01:16 AM IST

ಸಾರಾಂಶ

ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆ ನೀಡಿ, ಶಿಕ್ಷಣ, ಆರೋಗ್ಯ, ಅಗತ್ಯ ಮೂಲಭೂತ ಹಕ್ಕಗಳನ್ನು ನೀಡಿದ್ದು ನಾಲ್ವಡಿ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಅಶೋಕ ವೃತ್ತದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಶನಿವಾರ ಸಂಜೆ ನಾಲ್ವಡಿ ಕೃಷ್ಣರಾಜ ಒಡೆಯರ್ಪುಣ್ಯಸ್ಮರಣೆ ಆಯೋಜಿಸಲಾಯಿತು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆ ನೀಡಿ, ಶಿಕ್ಷಣ, ಆರೋಗ್ಯ, ಅಗತ್ಯ ಮೂಲಭೂತ ಹಕ್ಕಗಳನ್ನು ನೀಡಿದ್ದು ನಾಲ್ವಡಿ ಅವರು. ಅವರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳಬೇಕು. ಅವರ ಜಯಂತಿಯನ್ನು ಈ ವರ್ಷ ಚುನಾವಣಾ ನೀತಿ ಸಂಹಿತೆ ಎಂದು ನೆಪಹೇಳಿ ಜಿಲ್ಲಾಡಳಿತ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಟ್ಟು ನಂತರದ ದಿನದಲ್ಲೂ ಮಾಡಲಿಲ್ಲ. ಇದು ನಿಜಕ್ಕೂ ನೋವಿನ ಸಂಗತಿ ಎಂದರು.

ಜಿಲ್ಲಾಡಳಿತದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಾಲ್ವಡಿ ಅಭಿಮಾನಿಗಳು ಆ. 18 ರಂದು ಕಲಾಮಂದಿರ ಆವರಣದಲ್ಲಿ ಜಯಂತಿ ಮಾಡಲು ನಿರ್ಧರಿಸಿದ್ದೇವೆ. ನಾಲ್ವಡಿ ಅವರ ವಿಚಾರವನ್ನು ವಿದ್ಯಾರ್ಥಿಗಳಿಗೆ ಹೆಚ್ಚು ತಿಳಿಸಬೇಕು. ಇವರ ಜಯಂತಿ ಸುಮಾರು 23 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ನಾಲ್ವಡಿ ಅವರ ವಂಶಸ್ಥರು ಇನ್ನೂ ಇದ್ದಾರೆ. ಅವರು ನೆನಪು ಮಾಡಿಕೊಳ್ಳುವುದಿಲ್ಲ ಎಂದರು.

ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ ಸ್ವಾತಂತ್ರ್ಯ ಮುಂಚೆ ಎಲ್ಲಾ ರೀತಿಯ ಸವಲತ್ತನ್ನು ಕೊಟ್ಟವರು ನಾಲ್ವಡಿ ಅವರು. ಮುಂದಿನ ಪೀಳಿಗೆ ನಾಲ್ವಡಿ ಅವರ ಬಗ್ಗೆ ಪಠ್ಯ ಪುಸ್ತಕದಲ್ಲಿ ಅವರ ಆಡಳಿತದ ಸುಧಾರಣೆಗಳನ್ನು ಪಾಠದ ರೂಪದಲ್ಲಿ ತರುವಂತೆ ಒತ್ತಾಯಿಸಿದರು.

ಈ ವೇಳೆ ಪ್ರೊ. ನಂಜರಾಜ ಅರಸ್, ಸಿದ್ದರಾಜು ಸೋಸಲೆ, ಚಳುವಳಿಗಾರ ಅರವಿಂದ್ ಶರ್ಮ, ಲೇಖಕ ಸಿದ್ದಸ್ವಾಮಿ, ಕೃಷ್ಣಮೂರ್ತಿ ತಲಕಾಡು , ಲೋಕೇಶ್ ಮೈಸೂರು , ಶ್ರೀಧರ್ ರಾಜೇ ಅರಸ್ ಇದ್ದರು.