ಸಾರಾಂಶ
ಕಳೆದ ತಿಂಗಳು ಆಯೋಜಿಸಿದ್ದ ಚೊಚ್ಚಲ ‘ಕೃಷಿ ಸಂತೆ’ಯ ಯಶಸ್ಸಿನಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಪ್ರತಿ ತಿಂಗಳೂ ನಾಲ್ಕನೇ ಶನಿವಾರ ಕೃಷಿ ಸಂತೆ ಆಯೋಜಿಸಲು ತೀರ್ಮಾನಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ತಿಂಗಳು ಆಯೋಜಿಸಿದ್ದ ಚೊಚ್ಚಲ ‘ಕೃಷಿ ಸಂತೆ’ಯ ಯಶಸ್ಸಿನಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಪ್ರತಿ ತಿಂಗಳೂ ನಾಲ್ಕನೇ ಶನಿವಾರ ಕೃಷಿ ಸಂತೆ ಆಯೋಜಿಸಲು ತೀರ್ಮಾನಿಸಿದೆ.ಜೂ.22 ರಂದು ಮೊದಲ ಬಾರಿಗೆ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಅರ್ಧ ದಿನ ಕೃಷಿ ಸಂತೆಗೆ ನಿರೀಕ್ಷೆಗಿಂತ ಭಾರೀ ಪ್ರಮಾಣದಲ್ಲಿ ಜನತೆ ಆಗಮಿಸಿದ್ದರು. ಇದರಿಂದ ಉತ್ತೇಜಿತವಾದ ವಿವಿಯು ಪ್ರತಿ ತಿಂಗಳೂ ನಾಲ್ಕನೇ ಶನಿವಾರ ಸಂತೆ ಆಯೋಜಿಸಲು ಮುಂದಾಗಿದ್ದು, ಜು.27ರಂದು ಸಂತೆ ಆಯೋಜಿಲಿದೆ.
ಮಾರಾಟಕ್ಕೆ ವ್ಯಾಪಕ ಅವಕಾಶ:ಮೊದಲ ಕೃಷಿ ಸಂತೆಯಲ್ಲಿ ಕೃಷಿ ವಿವಿ ಮತ್ತು ವಿವಿ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಕೇಂದ್ರಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನ, ತಂತ್ರಜ್ಞಾನಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ಪರಿಚಯಿಸಲಾಗಿತ್ತು. ಇದೀಗ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳೂ ತಯಾರಿಸಿರುವ ಉತ್ಪನ್ನಗಳಿಗೂ ವೇದಿಕೆ ಕಲ್ಪಿಸಲು ನಿರ್ಧರಿಸಲಾಗಿದೆ.
ಜೈವಿಕ ಗೊಬ್ಬರ, ಕೃಷಿ ಯಂತ್ರೋಪಕರಣ, ಬಿತ್ತನೆ ಬೀಜ, ಸಿರಿಧಾನ್ಯಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು, ಹಣ್ಣು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು, ರಾಜಮುಡಿ ಅಕ್ಕಿ, ರಾಸಾಯನಿಕ ಮುಕ್ತ ಬೆಲ್ಲ, ಕೃಷಿ ಪ್ರಕಟಣೆ, ಹಲಸು, ತೆಂಗು, ಮಾವು ಮತ್ತಿತರ ವಸ್ತು, ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.ಕೃಷಿ ವಿವಿ ಪ್ರತಿ ತಿಂಗಳೂ ನಾಲ್ಕನೇ ಶನಿವಾರ ಕೃಷಿ ಸಂತೆ ಆಯೋಜಿಸಲು ತೀರ್ಮಾನಿಸಲಿದೆ ಎಂದು ಜೂ.24 ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು.
ವಿವಿಯ ಸಹಕಾರ ಪಡೆದಿರುವ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳಿಗೆ ಈ ಸಲ ಕೃಷಿ ಸಂತೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಮೊದಲ ಕೃಷಿ ಸಂತೆಯ ಯಶಸ್ಸಿನಿಂದಾಗಿ ಇನ್ನು ಮುಂದೆ ಪ್ರತಿ ತಿಂಗಳೂ ನಾಲ್ಕನೇ ಶನಿವಾರ ಕೃಷಿ ಸಂತೆ ಆಯೋಜಿಸಲಾಗುವುದು.- ಡಾ। ಎಸ್.ವಿ.ಸುರೇಶ, ಬೆಂಗಳೂರು ಕೃಷಿ ವಿವಿ ಕುಲಪತಿ.