ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಶ್ರೀವೆಂಕಟೇಶ್ವರಸ್ವಾಮಿ ದೇವಾಲಯದ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹರಿ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.

ಹರಿಸೇವೆ ಅಂಗವಾಗಿ ಪ್ರಶಾಂತ್ ಸ್ಕೂಲ್ ಬಳಿ ಹೂ, ಹೊಂಬಾಳೆ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಜಾನಪದ ಕಲಾತಂಡಗಳು, ವಾದ್ಯಮೇಳದೊಂದಿಗೆ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮರೆವಣಿಗೆ ನಡೆಸಲಾಯಿತು.

ಜನಪದ ಕಲಾ ತಂಡಗಳೊಂದಿಗೆ ಹಾಗೂ ಹೂ-ಹೊಂಬಾಳೆ ಮೂಲಕ ರಥದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ಭವ್ಯ ಮೆರವಣಿಗೆ ಮತ್ತು ಮುತ್ತತ್ತಿಯ ಕರಿಯಣ್ಣ- ಕೆಂಚಣ್ಣ ಸ್ವಾಮಿಗಳ ಪರಿಗೆ ಉತ್ಸವ ಮತ್ತು ಮತ್ತು ಮಣೆಸೇವೆ ಮೂಲಕ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.

ಮದ್ದೂರು-ಮಳವಳ್ಳಿ ರಸ್ತೆಯಲ್ಲಿ ಬೆಳ್ಳಿ ರಥ ಸಾಗುತಿದ್ದಂತೆ ರಸ್ತೆಯ ಎರಡು ಬದಿಯಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ತಮಟೆ ಶಬ್ದದಿಂದ ಭಕ್ತರನ್ನು ವಿಸ್ಮಯ ಗೊಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆ ಉದ್ದಕ್ಕೂ ಜನರು ಆರತಿ ನೀಡಿ ಪೂಜೆ ಸಲ್ಲಿಸಿದರು. ಭಕ್ತಾದಿಗಳು ಗೋವಿಂದನ ನಾಮಸ್ಮರಣೆ ಜಪಿಸುತ್ತ ದೇವಾಲಯಕ್ಕೆ ಉತ್ಸವ ಮೂರ್ತಿಯನ್ನು ಕರೆತಂದರು.


ದೇವಾಲಯದ ಮುಖ್ಯದ್ವಾರದಲ್ಲಿ ಶ್ರೀವೆಂಕಟೇಶ್ವರಸ್ವಾಮಿ, ಶ್ರೀದೇವಿ, ಶ್ರೀಭೂದೇವಿ ಮೂರ್ತಿಗಳಿಗೆ ಮಹಿಳೆಯರು ಕೆಂಪು ಮತ್ತು ಹಳದಿ ನೀರಿನ ಆರತಿ, ಬೆಲ್ಲದ ಆರತಿಬೆಳಗುವ ಮೂಲಕ ಉತ್ಸವ ಮೂರ್ತಿಗಳನ್ನು ದೇವಸ್ಥಾನದ ಪ್ರಾಂಗಣಕ್ಕೆ ಕರೆತರಲಾಯಿತು.

ಸ್ವಾಮಿ ಮೂರ್ತಿಯನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಿ ಆಭರಣಗಳಿಂದ ಶೃಂಗರಿಸಲಾಗಿ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಶಿವಾರ ಉಮೇಶ್ ತಂಡದಿಂದ ಭಕ್ತಿ ಗೀತಗಾಯನ ವಿಶೇಷವಾಗಿ ಗಮನ ಸೆಳೆಯಿತು.

ಹರಿಸೇವೆಗೆ ಶಾಸಕ ಕೆ.ಎಂ.ಉದಯ್ ಆಗಮಿಸಿ ದೇವರ ದರ್ಶನ ಪಡೆದು ಆರ್ಥಿಕ ನೆರವು ನೀಡಿದರು. ಬಳಿಕ ದೇವಾಲಯ ಅಭಿವೃದ್ಧಿ ಸಮತಿ ವತಿಯಿಂದ ಅಭಿನಂಸಲಾಯಿತು. ಅನ್ನಸಂತರ್ಪಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.