ನೇರವಾಗಿ ರೈತರ ಖಾತೆಗೆ ಜಮಾ: ಶಾಸಕ ಆರ್.ವಿ. ದೇಶಪಾಂಡೆ ಮಾಹಿತಿ

ಕನ್ನಡಪ್ರಭ ವಾರ್ತೆ ಹಳಿಯಾಳ

ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ₹5.57 ಕೋಟಿ ಪ್ರೋತ್ಸಾಹಧನ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ಅವರು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‌ಗೆ ₹50ರಂತೆ ವಿಶೇಷ ಪ್ರೋತ್ಸಾಹಧನ ಒಟ್ಟು ₹300 ಕೋಟಿ ಬಿಡುಗಡೆ ಮಾಡಿದೆ ಎಂದರು.

ಕಳೆದ ನವೆಂಬರ್‌ನಲ್ಲಿ ರಾಜ್ಯದಲ್ಲಿ ನಡೆದ ಸಭೆಯ ನಿರ್ಧಾರದಂತೆ ಎಫ್‌ಆರ್‌ಪಿ ಮೇಲೆ ಹೆಚ್ಚುವರಿ ಪ್ರತಿ ಟನ್‌ಗೆ ₹100 ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿತ್ತು. ಅದರಲ್ಲಿ ₹50 ಸಕ್ಕರೆ ಕಾರ್ಖಾನೆ ಹಾಗೂ ಇನ್ನುಳಿದ ₹50ನ್ನು ಸರ್ಕಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಿದೆ ಎಂದರು.


ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಪ್ರಸಕ್ತ ಸಾಲಿನಲ್ಲಿ ಫೆ. 15ರ ವರೆಗೆ 11,15,972 ಟನ್ ಕಬ್ಬು ನುರಿಸಿದ್ದು, ಈ ಅವಧಿಯ ವರೆಗೂ ಸರ್ಕಾರದ ಪ್ರೋತ್ಸಾಹಧನ ಬಿಡುಗಡೆಯಾಗಿದೆ. ಆದರೆ ಸ್ಥಳೀಯ ಸಕ್ಕರೆ ಕಾರ್ಖಾನೆಯು ಫೆ. 17ರ ವರೆಗೆ ಹೆಚ್ಚುವರಿ ಎರಡು ದಿನ ಕಬ್ಬು ನುರಿಸಿದ್ದು, ಈ ಅವಧಿಯಲ್ಲಿ 1200 ಟನ್ ಕಬ್ಬು ನುರಿಸಲಾಗಿದೆ. ಹೆಚ್ಚುವರಿ ಎರಡೂ ದಿನಗಳ ಅವದಿಯಲ್ಲಿ ಕಬ್ಬು ಪೂರೈಸಿದ ರೈತರಿಗೂ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸಂಬಂಧಿತ ಇಲಾಖೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಹೇಳಿದ್ದೇನೆ ಎಂದರು.

ಕ್ರೈಸ್ತ ಅಭಿವೃದ್ಧಿ ಮಂಡಳಿಯಿಂದ ನೆರವು:

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 120 ಫಲಾನುಭವಿಗಳಿಗೆ ವಿವಿಧ ಯೋಜನೆಗಳಲ್ಲಿ ಕ್ರೈಸ್ತ ಅಭಿವೃದ್ಧಿ ಮಂಡಳಿಯಿಂದ ಸಬ್ಸಿಡಿ ಆರ್ಥಿಕ ನೆರವು ದೊರೆತಿದೆ ಎಂದು ದೇಶಪಾಂಡೆ ತಿಳಿಸಿದರು. ಶ್ರಮಶಕ್ತಿ ಯೋಜನೆಯಲ್ಲಿ 63 ಫಲಾನುಭವಿಗಳಿಗೆ ತಲಾ ₹50 ಸಾವಿರ ಇದರಲ್ಲಿ ₹25 ಸಾವಿರ ಸಬ್ಸಿಡಿ, ಶ್ರಮಶಕ್ತಿ ಮಹಿಳಾ ಯೋಜನೆಯಲ್ಲಿ 2 ಫಲಾನುಭವಿಗಳಿಗೆ ತಲಾ ₹50 ಸಾವಿರ ಇದರಲ್ಲಿ ₹25 ಸಾವಿರ ಸಬ್ಸಿಡಿ, ವೃತ್ತಿ ಪೋಷಣ ಯೋಜನೆಯಲ್ಲಿ 49 ಫಲಾನುಭವಿಗಳಿಗೆ ತಲಾ ₹1 ಲಕ್ಷ, ಇದರಲ್ಲಿ ₹50 ಸಾವಿರ ಸಬ್ಸಿಡಿ, ಗಂಗಾಕಲ್ಯಾಣ ಯೋಜನೆಯಲ್ಲಿ 6 ಫಲಾನುಭವಿಗಳಿಗೆ ತಲಾ ₹3 ಲಕ್ಷ, ಇದರಲ್ಲಿ ₹3 ಲಕ್ಷ ಸಬ್ಸಿಡಿ ದೊರೆಯಲಿದೆ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೆರವು:

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ 2025-26ನೇ ಸಾಲಿಗೆ ಜಾರಿಗೊಳಿಸಿರುವ ವಿಪ್ರ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ರಾಜ್ಯದ ಒಟ್ಟು 41 ಫಲಾನುಭವಿಗಳಿಗೆ ₹80 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ನಾನು ಶಿಫಾರಸು ಮಾಡಿದ 6 ಫಲಾನುಭವಿಗಳಿಗೆ ಈ ಯೋಜನೆ ಲಾಭ ದೊರೆತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವ ಮುಖಂಡ ರವಿ ತೋರಣಗಟ್ಟಿ, ಬಿ.ಕೆ. ಹಳ್ಳಿ ಗ್ರಾಪಂ ಅಧ್ಯಕ್ಷ ರಾಹುಲ್ ಇದ್ದರು.