ಸಾರಾಂಶ
ಕಳೆದೊಂದು ವಾರದಲ್ಲಿ ಕುಡಿಯುವ ಕಾವೇರಿ ನೀರನ್ನು ಅನಾಗತ್ಯವಾಗಿ ಪೋಲು ಮಾಡಿದ 112 ಮಂದಿಯಿಂದ ಬರೋಬ್ಬರಿ ₹5.60 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದೊಂದು ವಾರದಲ್ಲಿ ಕುಡಿಯುವ ಕಾವೇರಿ ನೀರನ್ನು ಅನಾಗತ್ಯವಾಗಿ ಪೋಲು ಮಾಡಿದ 112 ಮಂದಿಯಿಂದ ಬರೋಬ್ಬರಿ ₹5.60 ಲಕ್ಷ ದಂಡ ವಸೂಲಿ ಮಾಡಲಾಗಿದೆ.ಫೆ.17ರಂದು ನಗರದಲ್ಲಿ ಅನಾಗತ್ಯವಾಗಿ ನೀರು ಪೋಲು ಮಾಡಬಾರದು. ನಿಯಮ ಉಲ್ಲಂಘಿಸಿ ಕುಡಿಯುವ ನೀರು ಪೋಲು ಮಾಡಿದರೆ ₹5 ಸಾವಿರ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಎಚ್ಚರಿಕೆ ನೀಡಿತ್ತು. 112 ಮಂದಿಗೆ ದಂಡ ವಿಧಿಸಲಾಗಿದೆ. ದಂಡ ವಿಧಿಸಿದ ಪ್ರಕರಣಗಳ ಪೈಕಿ ದಕ್ಷಿಣ ವಲಯದಲ್ಲಿ ಹೆಚ್ಚು 33 ಪ್ರಕರಣ ದಾಖಲಾಗಿವೆ. ಉತ್ತರದಲ್ಲಿ 23, ಪಶ್ಚಿಮ ಹಾಗೂ ಪೂರ್ವ ವಲಯದಲ್ಲಿ ತಲಾ 28 ಪ್ರಕರಣ ದಾಖಲಾಗಿವೆ.
ಬೆಂಗಳೂರಿಗೆ ಸುಮಾರು 100 ಕಿಲೋಮೀಟರ್‌ಗಳ ದೂರದಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಿನಿಮಾ ಮಂದಿರ ಹಾಗೂ ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಹಾಗೂ ಸ್ವಚ್ಛತೆಗೆ ಶುದ್ದ ಕುಡಿಯುವ ನೀರು ಬಳಕೆ ನಿಷೇಧಿಸಲಾಗಿತ್ತು. ಅಲ್ಲದೆ ಆ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಗೆ ಬಳಕೆ ಮಾಡಿದರೆ ಜಲಮಂಡಳಿ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.