ಚುನಾವಣಾ ಅಕ್ರಮ: ರಾಜ್ಯದಲ್ಲಿ ನಿನ್ನೆ ₹5.75 ಕೋಟಿ ನಗದು ವಶ

| Published : Mar 24 2024, 01:36 AM IST / Updated: Mar 24 2024, 04:03 PM IST

Withdrawal Money
ಚುನಾವಣಾ ಅಕ್ರಮ: ರಾಜ್ಯದಲ್ಲಿ ನಿನ್ನೆ ₹5.75 ಕೋಟಿ ನಗದು ವಶ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಿನ್ನೆ ₹5.75 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹೆಜ್ಜಾಲ ಚೆಕ್‌ಪೋಸ್ಟ್‌ನಲ್ಲಿ 5.36 ಕೋಟಿ ರು. ನಗದು, ಮೈಸೂರು ಕ್ಷೇತ್ರದಲ್ಲಿ 15.96 ಲಕ್ಷ ರು., ಬಳ್ಳಾರಿಯಲ್ಲಿ 26 ಲಕ್ಷ ರು. ನಗದನ್ನು ಲೋಕಸಭಾ ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತನಿಖಾ ತಂಡಗಳು ವಶಪಡಿಸಿಕೊಂಡಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ತಂಡಗಳು ನಗದು ಸೇರಿದಂತೆ 7.21 ಕೋಟಿ ರು. ಮೌಲ್ಯದ ಚಿನ್ನ, ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಾರಿ ನಂತರ ಈವರೆಗೆ 43.62 ಕೋಟಿ ರು. ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

17.35 ಲಕ್ಷ ರು. ಮೌಲ್ಯದ ಉಚಿತ ಉಡುಗೊರೆ, 1.98 ಕೋಟಿ ರು. ಮೌಲ್ಯದ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

23.37 ಕೋಟಿ ರು. ಮೌಲ್ಯದ 7.41 ಲಕ್ಷ ಲೀಟರ್‌ ಮದ್ಯ, 65.71 ಲಕ್ಷ ರು. ಮೌಲ್ಯದ 66.34 ಕೆಜಿ ಮಾದಕ ವಸ್ತುಗಳು, 1.27 ಕೋಟಿ ರು. ಮೌಲ್ಯದ 2 ಕೆಜಿ ಚಿನ್ನ, 21.47 ಲಕ್ಷ ರು. ಮೌಲ್ಯದ 46 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ.

ಹೊಸಪೇಟೆಯಲ್ಲಿ 30.45 ಲಕ್ಷ ರು. ಮೌಲ್ಯದ 203 ಕೆಜಿ ಶ್ರೀಗಂಧ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 496 ಎಫ್‌ಐಆರ್‌ ದಾಖಲಿಸಲಾಗಿದೆ. 72,627 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ. 

836 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಟು ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಸಿಆರ್‌ಪಿಸಿ ತಡೆಗಟ್ಟುವ ವಿಭಾಗದಡಿ 4175 ಪ್ರಕರಣಗಳನ್ನು ದಾಖಲಿಸಲಾಗಿದೆ.

₹25 ಲಕ್ಷ ಲಂಚಕ್ಕೆ ಬೇಡಿಕೆ: ಮುಡಾ ಕಮಿಷನರ್‌ ಮನ್ಸೂರ್‌ ಲೋಕಾ ಬಲೆಗೆ

ಮಂಗಳೂರು: ಬರೋಬ್ಬರಿ 25 ಲಕ್ಷ ರು. ಲಂಚ ಪಡೆಯುವಾಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್‌ ಮನ್ಸೂರ್ ಅಲಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಉದ್ಯಮಿಯೊಬ್ಬರು ತಮ್ಮ ಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದು, ಅದಕ್ಕೆ ಪ್ರತಿಯಾಗಿ ಸರ್ಕಾರ ಕೊಡುವ ಟಿಡಿಆರ್‌ಗೆ ಅನುಮೋದನೆ ನೀಡಲು ಮನ್ಸೂರ್‌ ಅಲಿ 25 ಲಕ್ಷ ರು.ಗೆ ಬೇಡಿಕೆಯಿಟ್ಟಿದ್ದರು.

ಪ್ರಕರಣದ ವಿವರ: ಉದ್ಯಮಿಯೊಬ್ಬರು ಮಂಗಳೂರು ತಾಲೂಕಿನ ಕುಡುಪು ಗ್ರಾಮದಲ್ಲಿ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. 

ಈ ನಡುವೆ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಘಟಕವನ್ನು ವಿಸ್ತರಿಸುವ ಕುರಿತು ಈ ಜಮೀನನ್ನು ಟಿಡಿಆರ್‌ ನಿಯಮದ ಅಡಿ ಖರೀದಿ ಮಾಡುವ ಬಗ್ಗೆ ಪಾಲಿಕೆ ಹಾಗೂ ಉದ್ಯಮಿ ನಡುವೆ ಪತ್ರ ವ್ಯವಹಾರ ನಡೆದಿತ್ತು. 

ಪಾಲಿಕೆ ಆಯುಕ್ತರು ಉದ್ಯಮಿಗೆ ಟಿಡಿಆರ್‌ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿಯಲ್ಲಿ ಫೈಲ್‌ ಕಳುಹಿಸಿದ್ದು, ಆಯುಕ್ತ ಮನ್ಸೂರ್‌ ಅಲಿ ಈ ಫೈಲಿಗೆ ಅನುಮೋದನೆ ನೀಡದೆ ವಿಳಂಬ ಮಾಡಿದ್ದರು. ಕಚೇರಿಗೆ ತೆರಳಿ ಈ ಬಗ್ಗೆ ಉದ್ಯಮಿ ಮಾತನಾಡಿದಾಗ 25 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದರ ವಿರುದ್ಧ ಉದ್ಯಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಶನಿವಾರ 25 ಲಕ್ಷ ರು. ಲಂಚ ಪಡೆಯುವ ವೇಳೆಗೆ ಮನ್ಸೂರ್‌ ಅಲಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜತೆಗೆ ಮುಡಾ ಕಮಿಷನರ್ ಅವರ ಬ್ರೋಕರ್‌ ಸಲೀಂ ಎಂಬಾತನನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.