ಸಾರಾಂಶ
ಕೇಂದ್ರ ಸರ್ಕಾರ 5.80 ಕೋಟಿ ರು. ಪಡಿತರ ಚೀಟಿಗಳನ್ನು ರದ್ದು ಮಾಡುವ ಮೂಲಕ ದೇಶದ ಬಡಜನರನ್ನು ಬೀದಿಗೆ ತಳ್ಳುವ ಕೆಲಸ ಮಾಡಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದರು.
ಹಲಗೂರು : ಕೇಂದ್ರ ಸರ್ಕಾರ 5.80 ಕೋಟಿ ರು. ಪಡಿತರ ಚೀಟಿಗಳನ್ನು ರದ್ದು ಮಾಡುವ ಮೂಲಕ ದೇಶದ ಬಡಜನರನ್ನು ಬೀದಿಗೆ ತಳ್ಳುವ ಕೆಲಸ ಮಾಡಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಡೆಯನ್ನು ನಮ್ಮ ಸಂಘದ ರಾಜ್ಯ ಸಮಿತಿ ಖಂಡಿಸುತ್ತದೆ. ಕಡಿತ ಆಗಿರುವ ಎಲ್ಲಾ ರೇಷನ್ ಕಾರ್ಡ್ ಗಳಿಗೂ ಪಡಿತರ ವಿತರಣೆ ಮುಂದುವರಿಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲಿಂಗಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೀಪುರ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಹಲವು ಬಾರಿ ಹೋರಾಟ ಮಾಡಿ ನ್ಯಾಯ ಬೆಲೆ ಅಂಗಡಿ ತೆರೆಯಲು ಆಗ್ರಹಿಸಲಾಗಿತ್ತು. ಮನವಿಗೆ ಸ್ಪಂದಿಸಿದ ತಾಲೂಕು ಆಡಳಿತ ಉಪ ಕೇಂದ್ರ ಮಂಜೂರು ಮಾಡಿದೆ. ಇದಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.
ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಲು ಕ್ರಮ ವಹಿಸಬೇಕು. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ವಿತರಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಮಶಾನ ಇಲ್ಲದೇ ಪರದಾಡುತ್ತಿದ್ದು, ಸ್ಮಶಾನಕ್ಕೆ ಸ್ಥಳ ಗುರುತಿಸಿ ಮಂಜೂರಾತಿಗೆ ಕ್ರಮ ವಹಿಸಬೇಕು. ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಬ್ಯಾಂಕ್ ಮೂಲಕವೇ ಸಾಲ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಹಲಗೂರು ವಲಯ ಸಮಿತಿ ಅಧ್ಯಕ್ಷೆ ಕುಂತೂರು ಲಕ್ಷ್ಮೀ, ಕಾರ್ಯದರ್ಶಿ ಗೊಲ್ಲರಹಳ್ಳಿ ಲಕ್ಷ್ಮೀ, ಸಂಘಟನೆ ಸದಸ್ಯರಾದ ರತ್ನಮ್ಮ, ವಸಂತ, ನಾಗಮ್ಮ, ರಾಜಮ್ಮ, ತುಳಸಮ್ಮ, ಪುಟ್ಟತಾಯಮ್ಮ, ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.